ಹಳೆಯದೊಂದು ಮಳೆಕವಿತೆ


ಇವತ್ತೂ ಮಳೆ ಬರಲಿಲ್ಲ ಕಣೋ
ಮೋಡಗಟ್ಟಿದ ಮಬ್ಬು
ಹಾಗೇ ಇದೆ ಇನ್ನೂ
ಬಾಯಾರಿ ಬಿರಿದ ಎದೆಗೆ
ನಿನ್ನ ನೆನಪು ಸುಡು ಸೂರ್ಯ

ಇಲ್ಲ,
ಬರಲಿಲ್ಲ ಮಳೆ ಇವತ್ತೂ,
ಕ್ಷಿತಿಜದಂಚಲ್ಲಿ ಕಾಮನ
ಬಿಲ್ಲು ಮೂಡಿದ್ದು ಯಾಕೋ
ಗೊತ್ತಾಗಲಿಲ್ಲ!
ನನ್ನ ಕಣ್ಣ ಹನಿ,
ನಿನ್ನ ನಗೆ ಬೆಳಕು-
ಅದರಲ್ಲಿ ಇದು ಹಾದು
ನಡೆದ
ಭೌತ ಶಾಸ್ತ್ರದ ಕರಾಮತ್ತು
ನನಗೆ ತಿಳಿಯಲಿಲ್ಲ

ಮಳೆ ಇವತ್ತೂ ಬರಲಿಲ್ಲವೋ…
ಅದಕೆಂದೇ ಕಾಪಿಟ್ಟ ಮಳೆ ಹಾಡು
ಉಳಿದುಹೋಗಿದೆ ಹಾಗೇ,
ಹನಿ ಹನಿಗು ನಿನ್ನ ಮುತ್ತನಿಟ್ಟು
ಹೆಣೆಯಲಿದ್ದ ಕನಸು ಕೂಡಾ

One thought on “ಹಳೆಯದೊಂದು ಮಳೆಕವಿತೆ

Add yours

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑