ಮತ್ತೆ ಮತ್ತೆ ನೆನಪಾಗುವ ಗೌರಿ ನನಗೇನಾಗಿದ್ದಳು?


ನನ್ನ ಅಮ್ಮನಿಗೆ ಈಗ ಐವತ್ತಾರು ವರ್ಷ. ಕಳೆದ ಕೆಲವು ದಿನಗಳಿಂದ ಬರೆಯಲು ಶುರು ಹಚ್ಚಿದ್ದಾಳೆ. ನನಗೆ ಇದಕ್ಕಿಂತ ಖುಷಿಯ ವಿಷಯ ಉಂಟೆ? ಅಪ್ಪಟ ಮಲೆನಾಡಿಗಳಾದ ಅಮ್ಮ ಒಂದು ಅನುಭವಗಳ ಕಂತೆ. ನನ್ನಲ್ಲಿ ಕೊಂಚವೇನಾದರೂ ಸೂಕ್ಷ್ಮತೆ, ಸಂವೇದನೆಗಳಿದ್ದರೆ ಅದು ಅಮ್ಮನಿಂದಲೇ. ನಾನು ಯಾವತ್ತೂ ಹೇಳಿಕೊಳ್ಳುವಂತೆ, ನಾನು ನೋಡಿದ ಮೊದಲ ಫೆಮಿನಿಸ್ಟ್‌ ನನ್ನಮ್ಮ. ಅವಳ ಒಂದು ಬರಹವನ್ನ  ’ಮಹಿಳಾ ದಿನಾಚರಣೆ’ಯ ಹೊತ್ತಿನಲ್ಲಿ ನಿಮ್ಮೆದುರು ಇಡುವ ಖುಷಿ ನನ್ನದು. ಅಂದ ಹಾಗೆ, ಅಮ್ಮನ ಹೆಸರು ಶೈಲಜಾ ಅಂತ.

`ಅಮ್ಮಾ… ಅಮ್ಮಾ… ‘
ಆ ಧ್ವನಿ ಕೇಳಿದ ಕೂಡಲೇ ಒಳಗಿದ್ದ ಯಾರಿಗೇ ಆಗಲಿಅ ದು ಗೌರಿಯದೇ ಅಂತ ಗೊತ್ತಾಗಿಬಿಡುತ್ತಿತ್ತು. ಹೌದು. ಗೌರಿ ನಮ್ಮನೆಗೆ ಬರುತ್ತಿದ್ದ ಖಾಯಂ ಅತಿಥಿ. ಪೇಟೆಯ ಯಾವುದೇ ಕೆಲಸಕ್ಕೆ ಬಂದರೂ ಮಧ್ಯಾಹ್ನದ ಊಟಕ್ಕೆ ಮಾತ್ರ ನಮ್ಮನೆಗೇ ಬರ‍್ತಿದ್ಲು. ಆಗೆಲ್ಲ ಅವರ ಹಳ್ಳಿಗಿದ್ದುದು ಎರಡು ಬಸ್‌ಗಳು ಮಾತ್ರ. ಹೀಗಾಗಿ ಬಸ್ ತಪ್ಪಿದ್ರೆ ನಮ್ಮನೆಯಲ್ಲೇ ಉಳಿದುಕೊಳ್ತಿದ್ಲು. ಬೆಳ್ಳಗೆ, ಎತ್ತರಕ್ಕೆ, ದುಂಡು ಮುಖದವಳಾಗಿದ್ದ ಗೌರಿ ನೀಟಾಗಿ ಸೀರೆಯುಟ್ಟು ಬರುತ್ತಿದ್ಲು.
ನನಗೂ ನನ್ನ ಎರಡನೇ ಅಣ್ಣನಿಗೂ ಹತ್ತು ವರ್ಷಗಳಷ್ಟು ಅಂತರ. ಆದರೂ ನಾವಿಬ್ಬರೂ ಯಾವಾಗಲೂ ಕಚ್ಚಾಡುತ್ತಿದ್ದೆವು. ಸಮಯ ಸಿಕ್ಕಾಗಲೆಲ್ಲ ನನ್ನನ್ನು ಅಳಿಸಲು ಅವನು ಉಪಯೋಗಿಸ್ತಿದ್ದ ಅಸ್ತ್ರ ಒಂದೇ, “ನಿನ್ನನ್ನ ಹೊಟ್ಟು ಕೊಟ್ಟು ತಂದಿದ್ದು. ನಮ್ಮನೆಗೆ ಬರ‍್ತಾಳಲ್ಲ ಗೌರಿ, ಅವಳ ಮನೆಯಿಂದ ತಂದಿದ್ದು ನಿನ್ನನ್ನ” ಅಂದು ಗೋಳಾಡಿಸ್ತಿದ್ದ. ನಾನು ಹೋ ಎಂದು ಗಲಾಟೆ ಮಾಡಿ ಇಬ್ರೂ ಅಮ್ಮನ ಹತ್ತಿರ ಬೈಸಿಕೊಳ್ತಿದ್ದೆವು. ಆದ್ರೆ ನಂಗೆ ಅವಾಗೆಲ್ಲ ಅನ್ನಿಸ್ತಿತ್ತು, “ಹೌದಿರಬಹುದೇನೋ… ನಾನು ನಮ್ಮನೇಲಿ ಯಾರ ಥರಾನೂ ಇಲ್ಲ. ಬ್ರಾಹ್ಮಣರ ಮನೇಲಿ ಹುಟ್ಕೊಂಡಿದ್ರೂ ಪೂಜೆ ಗೀಜೆ ಅಂದ್ರೆ ಮಾರು ದೂರ. ಸಾಲದ್ದಕ್ಕೆ ಕುಂಬಾರರವಳಾದ ಗೌರಿ ಹಾಗೆ ಬೆಳ್ಳಗೆ, ದುಂಡಗೆ ಬೇರೆ ಇದ್ದೀನಲ್ಲ!” ಅಂತ…
ದಿನ ಕಳಿತಾ ನಾನು ಹೈಸ್ಕೂಲಿಗೆ ಬಂದೆ. ಅಣ್ಣ ಆಗಲೇ ಕೆಲಸ ಹಿಡಿದು ಬೇರೆ ಊರಿಗೆ ಹೋಗಿಯಾಗಿತ್ತು. ಅಕ್ಕನ ಮದ್ವೇನೂ ಆಗಿತ್ತು. ಮನೇಲಿ ಅಪ್ಪಯ್ಯ, ಅಮ್ಮ ಮತ್ತು ನಾನು ಮಾತ್ರ. ಒಂದಿನ ಶಾಲೆಗೆ ರೆಡಿಯಾಗಿ ಹೊರಡೋ ಹೊತ್ತಿಗೆ ಹಳ್ಳಿಯಿಂದ ಒಬ್ಬಾಳು ಒಂದು ಸುದ್ದಿ ತಂದ. “ಗೌರಿ ಸತ್ ಹೋದ್ಲು ಅಯ್ಯ’ ಅಂದ. ಒಂದ್ನಿಮಿಷ ಅಮ್ಮ ಏನೂ ತೋಚದೆ ಕೂತುಬಿಟ್ಲು. ಅಪ್ಪಯ್ಯ ಆ ಆಳಿನ ಹಿಂದೇನೇ ಹಳ್ಳಿಗೆ ಹೋದ್ರು. ಅಮ್ಮ ಶಾಲೆಗೆ ಹೊರಟಿದ್ದ ನನ್ನ ತಡೆದು, ಬಚ್ಚಲು ಮನೆಗೆ ಒಯ್ದು ತಲೆ ಮೇಲೆ ಉಟ್ಟ ಬಟ್ಟೆ ಸಮೇತ ನೀರು ಹೊಯ್ದುಬಿಟ್ಲು. ಆಮೇಲೆ ಒಳಗೆ ಬಂದು ಬಟ್ಟೆ ಬದಲಾಯ್ಸು ಅನ್ನುವಾಗ ಅವಳ ಕಣ್ಣಲ್ಲಿ ನೀರು.
ಹಾಗೆ ನೀರು ಸುರಿದರೆ ಅದು ಮೈಲಿಗೆ ಕಳೆಯಲು ಅಂತಷ್ಟೆ ಗೊತ್ತಿದ್ದ ನನಗೆ ಅಮ್ಮನ ಕಣ್ಣೀರಿನ ಅರ್ಥ ತಿಳಿಯಲಿಲ್ಲ. ಶಾಲೆಗೆ ತಡವಾಗಿದ್ದರಿಂದ ಬೇರೆ ಬಟ್ಟೆ ತೊಟ್ಟು ಓಡಿದೆ.
ಇಷ್ಟು ವರ್ಷಗಳ ನಂತರ ಆ ಎಲ್ಲ ದೃಶ್ಯಗಳು ಕಣ್ಮುಂದೆ ಬರುತ್ತದೆ. ಗೌರಿಯ, ನನ್ನ ರೂಪದ ಸಾಮ್ಯತೆ, ಅವಳಿಗೆ ನಮ್ಮನೇಲಿ ದೊರೆಯುತ್ತಿದ್ದ ಆದರಾಥಿತ್ಯ, ಅವಳು ಸತ್ತಾಗ ಸುರಿಸಿಕೊಂಡ ತಣ್ಣೀರು ಮತ್ತು ಅಮ್ಮನ ಕಣ್ಣೀರು- ಇವಕ್ಕೆಲ್ಲ ಅರ್ಥ ಕೊಡ್ತಾ ಕೊಡ್ತಾ ತಲೆ ತಿರುಗತೊಡಗುತ್ತದೆ. ನಮ್ಮ ಮನೆಯಲ್ಲಿ ಇಂದಿಗೂ ನಾನೊಬ್ಬಳೆ ಬೇರೆ ಸ್ವಭಾವದವಳಾಗಿ ಹುಟ್ಟಿದ್ದೇನೆ ಎಂದು ಅಂದುಕೊಳ್ಳುವಾಗಲೆಲ್ಲ ಗೌರಿ ಮತ್ತಷ್ಟು ಹೆಚ್ಚಾಗಿ ನೆನಪಾಗುತ್ತಾಳೆ.

4 thoughts on “ಮತ್ತೆ ಮತ್ತೆ ನೆನಪಾಗುವ ಗೌರಿ ನನಗೇನಾಗಿದ್ದಳು?

Add yours

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑