ಕನ್ನ ಹಾಕೋದು ಶ್ರೀಮಂತರ ಮನೆಗೇನೆ
ರಾಜನಿಗೇನೆ ಶತ್ರುಗಳ ಕಾಟ ಜಾಸ್ತಿ
ಚೆಂದದ ಹುಡುಗಿಗೆ ಊರೆಲ್ಲ ಪ್ರೇಮಿಗಳು
ಹಣ್ಣು ತುಂಬಿದ ಮರಕ್ಕೇನೆ ಜಾಸ್ತಿ ಕಲ್ಲು ಹೊಡೆಯೋದು…
ಹಾಗೇ,
ತುಂಬಾ ಕೆಲಸ ಮಾಡೋರದ್ದೆ ತಲೆದಂಡ ಕೇಳೋದು!!
~ ಜ್ಞಾನೋದಯ # 1
“ಪ್ರೀತಿಸೋದು ಅಂದರೆ ಒಬ್ಬರಿಗೊಬ್ಬರನ್ನ ಪೂರ್ತಿ ಕೊಟ್ಟುಕೊಳ್ಳೋದು ಅನ್ನೋದು ಭ್ರಮೆ. ಅದೆಲ್ಲ ಎಷ್ಟು ಸುಳ್ಳು!
ಹಾಗೆ ಕೊಟ್ಟುಕೊಂಡ ಮೇಲೂ ಒಂಚೂರು ನಮ್ಮನ್ನ ನಾವಿಟ್ಟುಕೊಳ್ಳಬೇಕಂತೆ.
ಉಪ್ಪು ನೀರಲ್ಲಿ ಕರಗುತ್ತೆ ನಿಜ. but ಅದು ಒಂದೋ ಉಪ್ಪು ಅಥವಾ ನೀರು ಆಗಿ ಉಳೀತದಾ?
ಅದಕ್ಕೆ ಸಿಗೋ ಹೆಸರು ಉಪ್ಪುನೀರಂತಲೇ.
~ ಜ್ಞಾನೋದಯ # 2
ಕಳಕೊಳ್ಳೋದೇ ಆದರೆ ಮಾತಾಡಿ ಕಳಕೊಳ್ಳೋದು ಉತ್ತಮ.
ಆಡದೆ ಕಳಕೊಂಡರೆ ಕೊನೆಗೂ ಮೌನದ ಸಂಕಟವೊಂದು ಉಳಿದು ಬಿಡುತ್ತದೆ…
ಜ್ಞಾನೋದಯ #3
ಪ್ರತಿಯೊಬ್ಬರೂ ಮತ್ತೊಬ್ಬರನ್ನ ಪ್ರೀತಿಸೋದು ತಮ್ಮನ್ನ ತಾವು ಪ್ರೀತಿಸಿಕೊಳ್ಳೋದ್ರಿಂದಲೇ.
ತಮ್ಮೊಳಗಿನ ಪ್ರೀತಿಯನ್ನ ಪ್ರತಿಬಿಂಬಿಸಲಿಕ್ಕೆ ಯಾರಾದರೊಬ್ಬರು ಬೇಕಂತ ಬಯಸ್ತಾರೆ. ಆ ಮತ್ತೊಬ್ಬರೇ ’ಪ್ರೇಮಿ’ ಅನ್ನಿಸೋದು.
ಸಂತ ಜನಕ್ಕೆ ಒಂದು ಕನ್ನಡಿ ಸಾಕಾಗೋಲ್ಲ. ಅವರೊಳಗಿನ ಉತ್ಕಟ ಪ್ರೇಮವನ್ನ ಪ್ರತಿಬಿಂಬಿಸೋಕೆ ಜಗತ್ತೇ ಬೇಕಾಗತ್ತೆ.
ಹಾ! ನಾವು ’ಪ್ರೇಮಿ’ ಅಂತ ಆಯ್ದುಕೊಂಡ ಕನ್ನಡಿಯಲ್ಲಿ ಸಾಕಷ್ಟು ಪ್ರೇಮ ಕಾಣ್ತಿಲ್ಲವೆಂದರೆ ನಮ್ಮನ್ನ ನಾವು ಹೆಚ್ಚಾಗಿ ಪ್ರೀತಿಸ್ಕೊಳ್ತಿಲ್ಲ ಅಂತಲೇ ಅರ್ಥ.
~ಜ್ಞಾನೋದಯ #4
“ತುಂಬಿದ ಕೊಡವಾಗಿರಬೇಕು” ನಿಜ. ಅದು ತುಳುಕೋದಿಲ್ಲ.
ಆದರೆ ತುಂಬುಗೊಡಕ್ಕೆ ಕಸ ಕಡ್ಡಿ ಬಿದ್ದರೂ ಅಲೆಗಳು ಏಳ್ತವೆ.
ಅದಕ್ಕೇ, ಖಾಲಿಯಾಗಬೇಕು. ಯಾವ ಕಂಪನವೂ ಸಾಧ್ಯವಿಲ್ಲ ಅಲ್ಲಿ.
ಆದ್ರೆ, ಹಾಗೆ ಖಾಲಿಯಾಗೋ ಮುಂಚೆ ಒಮ್ಮೆ ತುಂಬಿಕೊಳ್ಳಬೇಕು. ಅದೇ ದೊಡ್ಡ ಸವಾಲು!
ಜ್ಞಾನೋದಯ # 5

ಜ್ಞಾನೋದಯ ಸರಣಿ ನನಗಿಷ್ಟ!
ಉದಯವಾಗುತ್ತಿದೆ ಈಗ
ಪಕ್ವವಾಗುತ್ತಾ ಸಾಗಲಿ!
***
ತುಂಬಿದ ಕೊಡವಾಗಿದ್ದೂ
ಅಲ್ಲಿ ಖಾಲಿತನವಿರಬೇಕು
ಆಗ ಅಲ್ಲಿ ಕಂಪನಗಳಿರವು.
ಖಾಲಿಯಾಗುಳಿದರೆ ಬರಿದೆ
ಸದ್ದಿಗೆ ಅಷ್ಟೇ ಕಿವಿ ಆಗಬೇಕು
ಸದ್ದುಗಳು ಅರ್ಥವ ನೀಡವು!