ಮ್ಯಾಟ್ರಿಮೊನಿಯಲ್ ವೆಬ್ಸೈಟಿನ ಮೂಲೆಯಲ್ಲೊಂದು ಜಾಹೀರಾತು ಪಿಳಿಪಿಳಿ ಅನ್ನುತ್ತಿದೆ.
`ನನ್ ಹೆಸ್ರು ಅನಾಮಿಕಾ. ಡೈವೋರ್ಸಿ. ವಯಸ್ಸು ೩೨. ರೆಪ್ಯುಟೆಡ್ ಕಂಪೆನಿ ಒಂದ್ರಲ್ಲಿ ಕೆಲಸ ಮಾಡ್ತಿದೀನಿ. ನಂಗೆ ನನ್ನ ಮಗೂನ ಅಕ್ಸೆಪ್ಟ್ ಮಾಡ್ಕೊಳ್ಳಬಲ್ಲ, ಒಳ್ಳೆ ಮನಸ್ಸಿನ, ಹ್ಯಾಂಡ್ಸಮ್ ಆಗಿರೋ ಗಂಡು ಬೇಕು. ಕ್ಯಾಸ್ಟ್ ನೋ ಬಾರ್. ಮತ್ತೆ ಮದ್ವೆಯಾಗಿ ಲೈಫ್ನಲ್ಲಿ ಸೆಟಲ್ ಆಗ್ಬೇಕು ಅನ್ನೋದು ನನ್ನಾಸೆ ಅಷ್ಟೆ…’ ಅನ್ನುತ್ತಾ ಫೋಟೋ ಅಟ್ಯಾಚ್ ಮಾಡಿರುವ ಹೆಣ್ಣು ನಿಜಕ್ಕೂ ಚೆಂದವಿದ್ದಾಳೆ. ನಗುಮುಖದ ಒಳಗೆ ಎಲ್ಲೋ ನೋವಿನ ಎಳೆ ಕಂಡಂತಾಗುತ್ತೆ. ಅವಳ ಹುಡುಕಾಟ ಗೆದ್ದು, ಒಳ್ಳೆ ಗಂಡು ಕೈಹಿಡಿಯಲಿ ಅನ್ನೋ ಹಾರೈಕೆ ತಾನಾಗಿ ಹೊಮ್ಮಿದರೆ ಆಶ್ಚರ್ಯವೇನಿಲ್ಲ. ಇಷ್ಟು ಲಕ್ಷಣವಾಗಿರೋ ಹುಡುಗಿಯ ಮೊದಲನೆ ಗಂಡ ಅದು ಹೆಂಗೆ ಬಿಟ್ಟನಪ್ಪಾ!? ಅನ್ನುವ ಯೋಚನೆಯೂ ಸುಳಿದುಹೋಗದೆ ಇರದು. ಏನು ಮಾಡೋದು? ಮದುವೆ ಸ್ವರ್ಗದಲ್ಲಿ ನಿಶ್ಚಯವಾದ ಹಾಗೆ, ಡೈವೋರ್ಸ್ಗಳು ನರಕದಲ್ಲಿ ನಿಶ್ಚಯವಾಗಿಬಿಟ್ಟಿರುತ್ತವೆ.
ಹೆಣ್ಣುಮಕ್ಕಳ ಬದುಕು ಶುರುವಾಗೋದು ಮದುವೆಯ ನಂತರ ಅನ್ನೋದು ಹಳೆ ಮಾತು. ಹಾಗಂತ ತಪ್ಪು ಮಾತೇನಲ್ಲ. ಇವತ್ತಿನ ಹೆಣ್ಣುಗಳು ಓದು, ದುಡಿಮೆ, ಸಾಧನೆಗಳ ಬೇರೆ ಬೇರೆ ದಿಕ್ಕಿನಲ್ಲಿ ಬದುಕು ಕಂಡುಕೊಳ್ಳುತ್ತಿದ್ದರೂ ಮದುವೆಗೆ ಕೊಡುವ ಇಂಪಾರ್ಟೆನ್ಸ್ ಕಡಿಮೆ ಏನೂ ಆಗಿಲ್ಲ. ಎಲ್ಲ ಯಶಸ್ಸುಗಳ ಜತೆಗೆ ಅಚ್ಚುಕಟ್ಟಾದ ಮನೆ, ಬೆಚ್ಚಗಿನ ಸಂಸಾರಕ್ಕೆ ನಮ್ಮ ಆದ್ಯತೆ ಇದ್ದೇ ಇದೆ. ಆದರೆ ಈ ಕನಸು ಕೈಗೂಡದೆ ಹೋದಾಗ? ಮದುವೆಯೇ ಬದುಕಾಗಿದ್ದ ದಿನಗಳಲ್ಲಿ, ಎಲ್ಲವೂ ಮುಗಿದುಹೋಯ್ತು ಅನ್ನೋ ನಿಶ್ಚಯಕ್ಕೆ ಬಂದುಬಿಡ್ತಿದ್ದರು. ಈಗಿನ ಸ್ಥಿತಿ ಗತಿ ಅಷ್ಟು ಸಂಕುಚಿತವಾಗಿಲ್ಲ. ಸಮಾನತೆ, ಮೌಲ್ಯ ಇತ್ಯಾದಿಗಳ ಜತೆಗೆ ಕುಸೀತಿರೋ ಗಂಡು ಹೆಣ್ಣು ಅನುಪಾತ ಬೇರೆ ಎರಡನೆ ಮದುವೆಯ ಅವಕಾಶಗಳನ್ನ ದೊಡ್ಡ ಸಂಖ್ಯೆಯಲ್ಲಿ ಕಟ್ಟಿಕೊಡುತ್ತಿದೆ.
ಅದು ಸರಿ, ಆದ್ರೆ…
ಅವಕಾಶಗಳು ಇದ್ದೇ ಇವೆ. ಕಾಲವೂ ಬದಲಾಗಿ ಎರಡನೆ ಮದುವೆ ಕಾಮನ್ ಆಗ್ತಿದೆ. ಎಲ್ಲಾ ಸರಿ. ಆದ್ರೆ… ಈ ಸೆಕೆಂಡ್ ಮ್ಯಾರೇಜ್ ಸಕ್ಸೆಸ್ ಆಗತ್ತಾ? ಹೊಸ ಸಂಗಾತಿ, ಹೊಸತೇ ಒಂದು ಪರಿಸರ, ಸಂಬಂಧಗಳು, ಎಲ್ಲ ಸೇರಿ ಗೋಜಲಾಗಿಬಿಟ್ರೆ? ಇಂಥದೊಂದು ಆತಂಕದ ಜೊತೆಗೇ ಹೆಣ್ಣೂಮಕ್ಕಳು ಮತ್ತೆ ಮದುವೆಯಾಗೋ ಬಗ್ಗೆ ಯೋಚಿಸ್ತಾರೆ. ಇದಕ್ಕೆ ಕಾರಣ ಇಲ್ಲದಿಲ್ಲ. ಜಮಾನಾದಿಂದಲೂ ಗಂಡಿಗೆ ಹೆಣ್ಣು ತನ್ನೊಬ್ಬಳ ಸಂಗಾತಿಯಾಗಿರಬೇಕು ಅನ್ನುವ ಹಂಬಲ ಇರೋದು ಮೊದಲ ಕಾರಣ. ಆದರೆ, ಇದು ತಪ್ಪು ಅಂತ ಹೇಳೋಕಾಗಲ್ಲ. ಇದು ಗಂಡಸಿನ ಇನ್ಬಿಲ್ಟ್ ಗುಣ. ಮೊದಲನೆಯ ಗಂಡ ಬದುಕಿಲ್ಲದೆ ಇದ್ದಾಗ ಎರಡನೆ ಮದುವೆಯಾದವರಿಗೆ ಈ ಸಮಸ್ಯೆ ಎದುರಾಗೋದು ಕಡಿಮೆ. ಡೈವೋರ್ಸ್ ನಂತರ ಮದುವೆಯಾದವರು ಸಾಮಾನ್ಯವಾಗಿ ಈ ವಿಷಯದಲ್ಲಿ ಹೊಸ ಸಂಗಾತಿಯ ಅನುಮಾನಗಳನ್ನು, ಅಸಹನೆಯನ್ನು ಎದುರಿಸಬೇಕಾಗುತ್ತೆ.
ಇಲ್ಲಿ ಮತ್ತೊಂದು ಭಾವನಾತ್ಮಕ ಸಮಸ್ಯೆಯೂ ಎದುರಾಗುತ್ತೆ. ಮಕ್ಕಳನ್ನು ಹೊಂದಿದ್ದು , ಎರಡನೆ ಮದುವೆಯ ಬಗ್ಗೆ ಯೋಚಿಸುವವರು ವಿಪರೀತ ತೊಳಲಾಟ ಅನುಭವಿಸ್ತಾರೆ. ವಯಸ್ಸಿದ್ದು, ಬದುಕಿಡೀ ಸಂಗಾತಿಯಿಲ್ಲದ ಒಂಟಿತನದಲ್ಲಿ ಕಳೆಯುವ ಯೋಚನೆಯೇ ಭಯಾನಕ ಎನಿಸುತ್ತಿರುವಾಗ, ಮಕ್ಕಳನ್ನು ಕಡೆಗಣಿಸಿ ಮದುವೆಯಾಗುವುದು ಹೇಗೆ ಎನ್ನುವ ಆತಂಕ. ಅಥವಾ ತನ್ನ ಎರಡನೆ ಮದುವೆಗೆ ಮಗು ಒಪ್ಪುತ್ತದೆಯೋ ಇಲ್ಲವೋ, ಅದು ಹೊಸ ಸಂಗಾತಿಯನ್ನು ಹೇಗೆ ಬರಮಾಡಿಕೊಳ್ಳುವುದೋ ಎನ್ನುವ ತುಮುಲ. ಇವನ್ನೆಲ್ಲ ಯೋಚಿಸಿ ಯೋಚಿಸಿಯೇ, ಅಂತಿಮವಾಗಿ ಒಂಟಿತನದ ಅನಿವಾರ್ಯತಯನ್ನೆ ಅಪ್ಪಿ ಮುಂದುವರೆಯುವವರು ಹೆಚ್ಚು.
ಹಾಗೊಮ್ಮೆ ಮಗುವನ್ನು ಒಪ್ಪಿಸಿ ಮದುವೆಯಾದರೆ ಇಂಥ ಸಮಸ್ಯೆ ಬರೋದಿಲ್ಲ ಅಂತಲ್ಲ. ಸಂಗಾತಿ ಸಹಜವಾಗಿ ತಾನೇ ಮೊದಲ ಆದ್ಯತೆಯಾಗಿರಬೇಕೆಂದು ಬಯಸುತ್ತಾನೆ. ಇತ್ತ ಮಗುವಿಗೂ ಅಮ್ಮನ ಮೊದಲ ಆದ್ಯತೆ ತಾನಾಗಿರಬೇಕೆಂಬ ನಿರೀಕ್ಷೆ ಇರುತ್ತೆ. ಮತ್ತೆ ಇವರಿಬ್ಬರಲ್ಲಿ ಯಾರು ಮೊದಲು? ಯಾರನ್ನ ಹೆಚ್ಚು ಫೋಕಸ್ ಮಾಡಬೇಕು? ಅನ್ನೋ ಗೊಂದಲದಲ್ಲಿ ಅವಳು ಹೈರಾಣಾಗುತ್ತಾಳೆ. ಈ ಗೊಂದಲ ಹೊಸ ಸಂಬಂಧದಲ್ಲಿ ಆಪ್ತತೆ ಬೆಳೆಯಲು ಅಡ್ಡಿಯಾಗುತ್ತೆ. ಇಷ್ಟು ಮಾತ್ರವಲ್ಲ, ಹಳೆ ಸಂಬಂಧದ ಬಗ್ಗೆಮತ್ತೆ ಮತ್ತೆ ಮಾತಾಡುತ್ತಲೇ ಇರುವುದು, ಆತನ ಬಗ್ಗೆ ಸಾಫ್ಟ್ಕಾರ್ನರ್ ವ್ಯಕ್ತಪಡಿಸೋದು ಕೂಡ ಈಗಿನ ಸಂಗಾತಿಯನ್ನ ಇರಿಟೇಟ್ ಮಾಡುತ್ತೆ.
ಹಾಗಂತ ಎರಡನೆ ಮದುವೆ ಸಕ್ಸಸ್ ಆಗೋದೇ ಇಲ್ಲ ಅಂತಲ್ಲ. ಅಥವಾ ಹಾಗೆ ಆಗುವ ಹೆಣ್ಣುಮಕ್ಕಳು ಎಲ್ಲವನ್ನೂ ಸಹಿಸ್ಕೊಂಡು ತಗ್ಗಿಬಗ್ಗಿ ನಡೀಬೇಕಂತಲೂ ಅಲ್ಲ. ಚೂರು ಜಾಣತನ, ಚೂರು ಕಾಂಪ್ರೊಮೈಸ್, ಮೊಗೆದಷ್ಟೂ ಪ್ರೀತಿ, ಬೆಟ್ಟದಷ್ಟು ಆತ್ಮವಿಶ್ವಾಸ – ಇಷ್ಟಿದ್ದರೆ ಸಾಕು. ಗಟ್ಟಿಮೇಳಕ್ಕೆ ಹೊತ್ತು ನಿಕ್ಕಿ ಮಾಡೋದೊಂದೇ ಬಾಕಿ!
ಬಹಳಷ್ಟು ಗೆದ್ದಿವೆ
ಯಾವಾಗಲೂ ಆಗೋದು ಹಾಗೇ. ಸಂಸಾರದಮಟ್ಟಿಗೆ ಗೆಲುವು ಅಷ್ಟು ಸುಲಭಕ್ಕೆ ಮನೆಮಾತಾಗೋದಿಲ್ಲ. ಅದೇನಿದ್ದರೂ ಸೋತವರ ಖಾತೆಯನ್ನ ತೆಗೆತೆಗೆದು ನೋಡುತ್ತೆ. ಮುರಿದುಬಿದ್ದ ಮನೆಗಳ ಬಗ್ಗೆ ಗಾಸಿಪ್ ಮಾಡೋದು, ಸುದ್ದಿ ಹರಡೋದು ಒಂಥರಾ ಕಡಿತದಂಥ ಖುಷಿ. ಈ ಕಾರಣದಿಂದ್ಲೇ ಗೆದ್ದು ಸುಖವಾಗಿರುವ ಎರಡನೆ ಮದುವೆಗಳ ಬಗ್ಗೆ ನಮ್ಮಲ್ಲಿ ಮಾಹಿತಿ ಕಡಿಮೆ. ಜೊತೆಗೆ, ಮರುಮದುವೆಗೆ ಮುಂಚೆ ಯೋಚಿಸಬೇಕಾದ ವಿಷಯಗಳು ಕೆಲವಿದೆ. ಯಾಕಾಗಿ ನಾನು ಈ ನಿರ್ಧಾರ ತೆಗೆದ್ಕೊಳ್ತಿದ್ದೇನೆ ಅನ್ನುವುದು ಮೊದಲು ಸ್ಪಷ್ಟವಿರಬೇಕು. ಮನೆಯವರ ಒತ್ತಾಯಕ್ಕೋ ಯಾರೋ ಪ್ರಪೋಸ್ ಮಾಡಿ ಬಲವಂತ ಮಾಡಿದರೆಂದೋ ಕೊರಳೊಡ್ಡಿದರೆ, ಆಮೇಲೆ ಪಾಡು ಪಡಬೇಕಾಗುತ್ತದೆ. ಅಗತ್ಯ, ಅನಿವಾರ್ಯತೆಗಳ ಜೊತೆಗೆ, ಯಾರೊಡನೆ ಪ್ರೇಮದಿಂದಲೂ ಇರಲು ಸಾಧ್ಯವಾಗಬಹುದು ಎನ್ನಿಸುತ್ತದೆಯೋ ಅಂಥವರನ್ನೆ ಆಯ್ಕೆ ಮಾಡಿಕೊಳ್ಳಿ. ಆಯ್ಕೆಯೊಂದು ಸರಿಯಾಗಿದ್ದುಬಿಟ್ಟರೆ, ಸುಖ ಬದುಕಿನ ಕನಸು ಮುಕ್ಕಾಲು ನೆರವೇರಿದಂತೆಯೇ.
************************
ಸಕ್ಸಸ್ ಸೂಕ್ತಿ
ಚೂರು ಜಾಗ್ರತೆಯಾಗಿ ಹೆಜ್ಜೆಯಿಟ್ಟರೆ ಎರಡನೆ ಮದುವೆಯನ್ನ ಸಿಹಿಯಾಗಿಸ್ಕೊಳ್ಳಬಹುದು. ಬಹಳಷ್ಟು ಬಾರಿ ನಮ್ಮ ಸೆಕೆಂಡ್ ಚಾಯ್ಸೇ ಗೆದ್ದಿರುತ್ತೆ ಅಲ್ವೆ?
* ಬದುಕಿನ ಪ್ರತಿ ಕ್ಷಣ ಹೊಸತು. ಹೊಸ ಸಂಬಂಧ, ಹೊಸ ಸಂಗಾತಿಯೊಂದಿಗೆ ಬದುಕನ್ನೂ ನವೀಕರಿಸಿಕೊಳ್ಳಿ. ಮುಗಿದುಹೋದ ಬದುಕನ್ನ ನೆನಪಿನ ಕೋಶದಿಂದ ಪೂರ್ತಿ ಖಾಲಿ ಮಾಡಿ.
* ಮಗು ಇದ್ದರೆ, ಮರುಮದುವೆಗೆ ಮುಂಚೆ ನಿಮ್ಮ ಸಂಗಾತಿ ಹಾಗೂ ಮಗು- ಇಬ್ಬರಿಗೂ ಒಡನಾಟಗಳನ್ನ ಏರ್ಪಡಿಸಿ. ಅವರಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡಲಿ. ಅವರಿಬ್ಬರಲ್ಲಿ ಯಾವ ಹೊಂದಾಣಿಕೆಯೂ ಸಾಧ್ಯವಾಗ್ತಿಲ್ಲ ಅನ್ನಿಸಿದರೆ, ಮದುವೆ ಯೋಚನೆ ಬಿಟ್ಟುಬಿಡಿ. ಯಾಕಂದರೆ ಆಮೇಲಿನ ಸಂಸಾರ ಖಂಡಿತ ಬಿರುಕು ಬಿಡುವುದು. ಮುರಿದ ಮನೆಯಲ್ಲಿ ಬದುಕೋದಕ್ಕಿಂತ ಕಟ್ಟದೆ ಇರುವ ಮನೆಯಲ್ಲಿ ಬದುಕೋದೇ ಒಳ್ಳೆಯದು.
* ಎರಡನೆ ಮದುವೆಗೆ ಸಂಗಾತಿಯನ್ನ ಆಯ್ದುಕೊಳ್ಳುವಾಗ ಏನೆಲ್ಲವನ್ನು ಪರಿಗಣಿಸಿದ್ದೀರಿ? ಪ್ರಾಮಾಣಿಕವಾಗಿ ಯೋಚಿಸಿ. ನಿರೀಕ್ಷೆಗಳಿಗೆ ಕಡಿವಾಣ ಇರಲಿ. ಮಿ.ರೈಟ್ ಸ್ವರ್ಗದಲ್ಲೂ ಸೃಷ್ಟಿಯಾಗೋದಿಲ್ಲ. ಮೊದಲ ಸಂಗಾತಿಯಲ್ಲಿದ್ದ ಕೊರತೆಗಳನ್ನೆಲ್ಲ ಇವರು ತುಂಬಿಕೊಡಬೇಕು ಅಂತ ಬಯಸೋದು ಪೆದ್ದುತನವಷ್ಟೆ.
ನಿಮ್ಮದೊಂದು ಉತ್ತರ