“ನಂಗೆ ಅಪ್ಪನಂಥ ಹುಡುಗ ಬೇಕು!”
ಇಂಥಾ ಹಂಬಲ ಅಪರೂಪದ್ದೇನಲ್ಲ. ಆದರೆ ಮೇಲರಿವಿಗೆ ಬಂದಿರೋದಿಲ್ಲ ಅಷ್ಟೆ. ಮದುವೆಗೆ ಸಿದ್ಧವಾಗಿ ನಿಂತಾಗಿನಿಂದ ಗಂಡುಗಳಲ್ಲಿ `ಅಪ್ಪ’ನ ಹುಡುಕಾಟಕ್ಕೆ ತೊಡಗಿರ್ತಾರೆ `ಡ್ಯಾಡೀಸ್ ಡಾರ್ಲಿಂಗ್’ ಆಗಿ ಬೆಳೆದ ಹೆಣ್ಮಕ್ಕಳು. ಇದನ್ನ ಬಹಳ ಹಿಂದೆಯೇ ಸಿಗ್ಮಂಡ್ ಫ್ರ್ಯಾಯ್ಡ್ ಉದ್ದುದ್ದ ಥಿಯರಿ ಮೂಲಕ ಹೇಳಿಯಾಗಿದೆ. ಆದರೆ ತಾವು ಹೀಗೆ ಇಂಥಾದ್ದೇ ಹುಡುಕಾಟದಲ್ಲಿ ಇದ್ದೀವಿ ಅಂತ ಕಂಡುಕೊಳ್ಳುವವರು ಕಡಿಮೆ. `ಅಪ್ಪನ ಥರ’ ಅನ್ನುವ ಸಾಮ್ಯ ಹೊಳೆಯದೆಯೇ ಅವನಲ್ಲಿನ ಗುಣಗಳನ್ನ ಪಟ್ಟಿ ಮಾಡಿಕೊಂಡು ನನ್ನ ಹುಡುಗ ಹೀಗೆಲ್ಲಾ ಇರಬೇಕು ಅಂದುಕೊಳ್ತಿರುತ್ತಾರೆ. ಈ ನಿರೀಕ್ಷೆಯೊಂದು ಮೊಂಡುಹಟವಾಗಿಬಿಟ್ಟರೆ ಮದುವೆ ಕಷ್ಟ. ಮದುವೆಯಾದ ಮೇಲೂ ಅದು ಹೇರಿಕೆಯ ಥರ ಆಗಿಬಿಟ್ಟರೆ ಸಂಸಾರ ಹಾಳೆದ್ದುಹೋಗುತ್ತದೆ. ಕೆಲವರ ಮಟ್ಟಿಗೆ ಅದು ಮುರಿದುಬೀಳುವುದೂ ಉಂಟು.
ಆದರೆ, ತೀರಾ ಅತಿರೇಕಕ್ಕೆ ಹೋಗದ ಹೊರತು ಅಪ್ಪನಂಥ ಹುಡುಗ ಬೇಕನ್ನೋ ಬಯಕೆಯಿಂದ ಕೆಡುಕೇನಿಲ್ಲ . ಒಂದು ಥರದ ಗುಣ- ಸ್ವಭಾವಕ್ಕೆ ಹೇಗೆ ಸ್ಪಂದಿಸಬೇಕು, ಪ್ರತಿಕ್ರಿಯಿಸಬೇಕು ಅನ್ನೋದನ್ನ ಹೆಣ್ಣುಮಕ್ಕಳು ಚೆನ್ನಾಗಿ ಮನದಟ್ಟು ಮಾಡಿಕೊಂಡಿರುತ್ತಾರೆ. ಇದರಿಂದ ಮುಂದೆ ಅವರ ಕುಟುಂಬವನ್ನು ನಿಭಾಯಿಸಲು ಹೆಚ್ಚು ಶ್ರಮ ಹಾಕಬೇಕಾಗಿ ಬರುವುದಿಲ್ಲ. ಏರಿಳಿತಗಳಿಲ್ಲದ ಸಪಾಟು ಜೀವನ ಹಬಯಸುವ, ಇಲ್ಲವೆ ವೃತ್ತಿ-ದುಡಿಮೆಗಳಲ್ಲಿ ಮಹಾತ್ವಾಕಾಂಕ್ಷೆಯಿದ್ದು, ಕುಟುಂಬದ ರಿಸ್ಕ್ ಕಡಿಮೆ ಇದ್ದರೆ ಒಳಿತೆಂದು ಬಯಸುವ ಹೆಣ್ಣುಮಕ್ಕಳಿಗೆ ಇದು ಅನುಕೂಲ. ಸವಹಾರ್ದಯುತ ಕುಟುಂಬದಲ್ಲಿ ಬೆಳೆದುಬಂದ ಹೆಣ್ಣುಮಕ್ಕಳಿಗಂತೂ ಹೊರಗೆ ಗಂಡಸರು ಹೇಗಿರುತ್ತಾರೋ ತಾವು ಏನೆಲ್ಲ ನೋಡಬೇಕಾಗಿ ಬರುತ್ತದೋ ಅನ್ನುವ ಅಂಜಿಕೆ ಬೇರೆ ಇರುತ್ತದೆ. ಅಂತಹ ರಗಳೆ ಬೇಡವೆಂದೇ ಅವರು ತಮ್ಮ ‘ಡ್ಯಾಡಿ ಕೂಲ್’ ಮಾಡೆಲ್‌ನ ಬೆನ್ನುಹತ್ತುತ್ತಾರೆ.
ಹಂಗ್ಯಾಕೆ ಅನಿಸುತ್ತೆ?
ಗಂಡ ಅಪ್ಪನ ಥರ ಇರಬೇಕು ಅನ್ನುವ ನಮ್ಮ ಬಯಕೆ ಉಂಟಾಗೋದು ನಮ್ಮ ಸೂಪರ್ ಇಗೋದಿಂದ. ನಮ್ಮ ಕುಟುಂಬದ ಪ್ರತಿಷ್ಠೆ, ಶ್ರೇಷ್ಟತೆಗಳ ಬಗ್ಗೆ ನಮಗಿರುವ ಹೆಮ್ಮೆಯ ಜೊತೆಜೊತೆಗೆ ಉಳಿದ ಕುಟುಂಬ ಮತ್ತು ಸಮುದಾಯಗಳ ಬಗ್ಗೆ ಅಂಥಾ ಒಲವೇನೂ ಇಲ್ಲದಿರುವುದು ಕೂಡ ಇಂಥ ಆಯ್ಕೆಯನ್ನು ಪ್ರಚೋದಿಸುತ್ತವೆ. ಮಕ್ಕಳಿಗೆ ಗಂಡು ಅಥವಾ ಹೆಣ್ಣಿನ ಬಗ್ಗೆ, ಸಂಬಂಧಗಳ ಬಗ್ಗೆ ಮೊದಲ ಪರಿಚಯವಾಗೋದು ಮನೆಯಲ್ಲೇ. ಗಂಡುಮಕ್ಕಳಿಗೆ ಅಮ್ಮನ ಮೇಲೂ ಹೆಣ್ಣು ಮಕ್ಕಳಿಗೆ ಅಪ್ಪನ ಮೇಲೂ ಗುಲಗಂಜಿಯಷ್ಟಾದರೂ ಹೆಚ್ಚು ಪ್ರೀತಿ ಇರುತ್ತೆ. ಇದು ನಮ್ಮ ದಿನದ ಬದುಕಲ್ಲಿ ಗಮನಕ್ಕೆ ಬಂದಿರುವುದರ ಜೊತೆಗೆ, ಮನೋವಿಜ್ಞಾನಿಗಳಿಂದಲೂ ಅಧ್ಯಯನದ ಮೂಲಕ ಕನರ್ಮ್ ಮಾಡಲ್ಪಟ್ಟಿದೆ. ಇದಕ್ಕೆ ಆಪೋಸಿಟ್ ಸೆಕ್ಸ್ ಕಡೆಗಿನ ಬೇಸಿಕ್ ಇನ್ಸ್‌ಟಿಂಕ್ಟ್ ಕಾರಣ ಅಂದಿದ್ದಾನೆ ಫ್ರಾಯ್ಡ್.
ಅಮ್ಮನ ಬಗ್ಗೆ ಕೇರ್ ತೆಗೆದುಕೊಳ್ಳುವ ಕುಟುಂಬವನ್ನು ಸಲೀಸಾಗಿ ನಿಭಾಯಿಸುವ, ಎಂತೆಂಥದೋ ರಿಸ್ಕ್‌ಗಳಿಗೆ ಎದೆಯೊಡ್ಡುವ ಅಪ್ಪ ಸೂಪರ್ ಹೀರೋ ಥರ ಕಾಣಿಸುತ್ತಿರುತ್ತಾನೆ. ಷ್ಟೋ ಸಲ ಅಪ್ಪ ಅಮ್ಮನ ಜಗಳದಲ್ಲಿ ಹೆಣ್ಣುಮಕ್ಕಳು ಅಪ್ಪನ ತಪ್ಪಿದ್ದೂ ಅವನ ಪರ ವಹಿಸುತ್ತಾರೆ. ಆದರೆ ಅಪ್ಪನ ದುಷ್ಟತನ ಹಾಗೂ ಅಮ್ಮನೆಡೆಗಿನ ಕ್ರೌರ್ಯ ಮಿತಿಮೀರಿದ ಕುಟುಂಬಗಳಲ್ಲಿ ಹೆಣ್ಣುಮಕ್ಕಳು ಅವನೆಡೆಗೆ ಮಾತ್ರವಲ್ಲ, ಇಡೀ ಗಂಡುಸಂಕುಲದ ಬಗ್ಗೆ ದ್ವೇಷ ಅಥವಾ ತಾತ್ಸಾರ ಬೆಳೆಸಿಕೊಳ್ಳುವ ಅಪಾಯವಿರುತ್ತದೆ. ಹೀಗಾಗಿ ಗಂಡಿನ ಬಗೆಗೆ ಮೆಚ್ಚುಗೆ ಅಥವಾ ಉದಾಸೀನ- ಈ ಯಾವುದೇ ಭಾವದ ಬೆಳವಣಿಗೆಗೂ ಅಪ್ಪನ ನಡವಳಿಕೆಯ ನೆನಪು ಗಾಢವಾದ ಪ್ರಭಾವ ಬೀರಿರುತ್ತದೆ.
ಕೆಲವೊಂದು ವಿಲಕ್ಷಣ ಸನ್ನಿವೇಶಗಳು ಹೀಗೂ ಇರುತ್ತವೆ. ಕೆಡುಕನಾದರೂ ಸರಿ, ತನ್ನೊಡನೆ ವಾತ್ಸಲ್ಯದಿಂದ ಇರುವ ಅಪ್ಪನ ಬಗ್ಗೆಯೂ ಹೆಣ್ಣುಮಕ್ಕಳು ಗೌರವ ಇರಿಸಿಕೊಂಡಿರುತ್ತಾರೆ. ವಿಪರೀತದ ಸಂಗತಿ ಅಂದರೆ, ಕೆಲವರು ತಮ್ಮ ಸಂಗಾತಿಯಲ್ಲೂ ಇವರು ಅಪ್ಪನ ಕೆಡುಕುಗಳನ್ನು ಅರಸತೊಡಗುತ್ತಾರೆ ಅನ್ನುವುದು! ಎಷ್ಟೋ ಹೆಣ್ಣುಮಕ್ಕಳು ತಂದೆಯ ಜಬರ್ದಸ್ತುತನವನ್ನು ಆರಾಧಿಸುತ್ತಾರೆ. ಅವನು ಕುಡಿಯುತ್ತಿದ್ದರೆ ಕುಡಿಯದೆ ಇರುವ ತನ್ನ ಪತಿಯಲ್ಲಿ ಏನಾದರೂ ಕೊರತೆ ಇದೆಯೆಂದು ಚಿಂತಿಸತೊಡಗುತ್ತಾರೆ. ಅಮ್ಮನನ್ನು ಬಯಯುತ್ತಲೇ ಪ್ರೀತಿಸುವ ಅಪ್ಪ ಅವರಿಗಿಷ್ಟ. ಹೀಗಿದ್ದಾಗ ತನ್ನನ್ನು ಬಯ್ಯದೇ ಇರುವ ಗಂಡ ನೀರಸವೆನ್ನಿಸತೊಡಗುವುದೂ ಉಂಟು! ಇಂಥಾ ಅಸಹಜ ನಿರೀಕ್ಷೆಗಳು ಅತೃಪ್ತಿಯ ಚಡಪಡಿಕೆ ದಾರಿಮಾಡಿಕೊಡುತ್ತವೆ’
ಕೆಲವು ಹೆಂಡತಿಯರು ಪ್ರತಿ ನಿರ್ಧಾರ ತೆಗೆದುಕೊಳ್ಳುವಾಗಲೂ ಅಪ್ಪ ಹೀಗೆ ಮಾಡುತ್ತಿದ್ದರು ಎಂದೋ ಅವರನ್ನೊಮ್ಮೆ ಕೇಳಿಬಿಡೋಣ ಎಂದೋ ಹೇಳುವುದುಂಟು. ಅಪ್ಪನ ಅನುಭವ ಮತ್ತು ಸಾಮರ್ಥ್ಯಗಳ ಬಗೆಗಿನ ಮೆಚ್ಚುಗೆಯಿಂದ ಅವರು ಹೀಗೆ ಮಾಡುತ್ತಾರೆ. ಆದರೆ ಹೀಗೆ ಪ್ರತಿಯೊಂದಕ್ಕೂ ಅಪ್ಪ ಅಪ್ಪ ಅನ್ನುತ್ತಿರುವುದು ಗಂಡಸರಿಗೆ ಕಿರಿಕಿರಿ ಎನಿಸುತ್ತೆ. ನಮ್ಮ ಬಗ್ಗೆ ಇವರಿಗೆ ನಂಬಿಕೆಯೇ ಇಲ್ಲವೇನೋ ಅನ್ನಿಸಿಬಿಡುತ್ತೆ. ಅಪ್ಪನ ಗುಣಗಾನ ಎಷ್ಟೋ ಬಾರಿ ನಮ್ಮ ಅವಮಾನ ಆಗಿಬಿಡುವುದೂ ಉಂಟು.

ನಿಮ್ಮ ಟಿಪ್ಪಣಿ ಬರೆಯಿರಿ