ಇನ್ನಾದರೂ ವ್ಯಾಪ್ತಿ ಪ್ರದೇಶದ ಒಳಗೆ ಬಾ…


ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ…” ಒಂದೇ ಸಮ ಬಡ್ಕೊಳ್ತಿತ್ತು ಫೋನು.

ಅದು ನೀನಿಲ್ಲದ ಮೊದಲ ಭಾನುವಾರ. ಈವರೆಗೆ ನೂರಿಪ್ಪತ್ತೆಂಟು ಭಾನುವಾರಗಳನ್ನ ನಾವು ಒಟ್ಟಿಗೆ ಕಳೆದಿದ್ದೆವು, ಒಮ್ಮೆಯೂ ತಪ್ಪದ ಹಾಗೆ. ನಾನು ಆರು ದಿನವೂ ಬರವಣಿಗೆಯ ಬದುಕಲ್ಲಿ ಹೈರಾಣಾಗಿರುತ್ತಿದ್ದೆ. ನೀನು ಮೀಸೆ ಬೆಳೆದ ಮಕ್ಕಳೆದುರು, ಪುಸ್ತಕದಲ್ಲಿರದ ಚರಿತ್ರೆಯ ಪಾಠವನ್ನೆಲ್ಲ ಹೇಳೋದ್ರಲ್ಲಿ ಸುಸ್ತು ಹೊಡೆದಿರುತ್ತಿದ್ದೆ.

ಹೌದಲ್ಲಾ!? ಪಾಠ ಮಾಡಯ್ಯಾ ಅಂದ್ರೆ ನೀನು ಪಾಠದಲ್ಲಿರದ್ದನ್ನೆಲ್ಲ ಹೇಳ್ತಾ ಮೈಮರೆತುಬಿಡ್ತಿದ್ದೆಕ್ಯಾಂಪಸ್ಸಿನ ತುಂಬೆಲ್ಲಕ್ರಾಂತಿಕಾರಿಅನ್ನೋ ಪಟ್ಟ ನಿಂದಾಗಿತ್ತು. ಅದೆಷ್ಟು ಸಾರ್ತಿ ಪ್ರಿನ್ಸಿಯ ಕನ್ನಡಕ ನಿನ್ನ ಗುರಾಯಿಸಿತ್ತೋ?

ಬಿಡು. ಅದೀಗ ಮುಗಿದ ವಿಚಾರ. ಅವತ್ತೊಂದು ದಿನ ಕಾಲೇಜು ರಾಜಕೀಯದ ನೂರೆಂಟು ಹೊಟ್ಟೆಕಿಚ್ಚುಗಳಲ್ಲಿ ನನ್ನನಿನ್ನ ಸಂಬಂಧದ ಬಣ್ಣ ಎರಚಿ, ನೀ ರಿಸೈನು ಮಾಡಿಬಂದೆ ನೋಡು, ಅವತ್ತಿಗೇ ಅದರ ಕಥೆ ಮುಗ್ದುಹೋಯ್ತು.

ಆಮೇಲೆ ನೀ ಭಾಷಣಬರಹ ಅಂತ ಉಳಿದುಬಿಟ್ಟೆ. ಹೊಟ್ಟೆಪಾಡು ನಿಂಗ್ಯಾವತ್ತೂ ಮುಖ್ಯವಾಗಲೇ ಇಲ್ಲ! ಜೊತೆಜೊತೆಗೆ ನಮ್ಮಲ್ಲೊಂದು ಪ್ರಬುದ್ಧತೆ ಬೆಳೀತಾ ಹೋಯ್ತು.

ನಂಗನ್ನಿಸತ್ತೆ,  ನಾವ್ಯಾವತ್ತೂ ಪ್ರೀತಿಸಲೇ ಇಲ್ಲ ಅಂತ. ಈವತ್ತು ಲೋಕ ಯಾವುದನ್ನ ಪ್ರೀತಿ ಅನ್ನುತ್ತಿದೆಯೋ, ಅಂಥದೊಂದು ಕೊಡುಕೊಳ್ಳುವಿಕೆಯ ಭಾವ ನಮ್ಮದಾಗಿರ್ಲಿಲ್ಲ. ಕೊನೆಗೂ ನಮ್ಮ ನಂಟಿಗೊಂದು ಹೆಸರು ಸೃಷ್ಟಿಯಾಗ್ಲೇ ಇಲ್ಲ.

ಇವೆಲ್ಲಾ ನೆನಪಾಗಿದ್ದು ನೀನಿಲ್ಲದ ಮೊದಲನೇ ಭಾನುವಾರ. ಬರೋಬ್ಬರಿ ನಾಲ್ಕು ವರ್ಷ ನನ್ನ ಈ ಸಂಭ್ರಮದ ರಜಾದಿನದಲ್ಲಿ ಶಾಮೀಲಾಗಿದ್ದ ನೀನು ಅವತ್ತು ಹೇಳದೇ ಕೇಳದೇ ಇಲ್ಲವಾಗಿಬಿಟ್ಟಿದ್ದೆ. ಹಿಂದಿನ ದಿನ ಹೋಟೆಲ್ಲಲ್ಲಿ ಕುಂತು ಮೃದುವಾಗಿ ಕೈತಟ್ಟುತ್ತಾ, “ಸಾಧನೆ ಮಾಡ್ಬೇಕು ಕಣೇ ನೀನುಸುಮ್ನೆ ಹೀಗೇ ಇದ್ದುಬಿಡೋದಲ್ಲಅಂದಾಗಲೇ ನಂಗೇನೋ ಅನುಮಾನ. ನೀನೇನೋ ಮಸಲತ್ತು ನಡೆಸಿದ್ದೀ ಅಂತಅದು ನಿಜವಾಗಿಹೋಗಿತ್ತು!

ಆಫೀಸೂ ಇಲ್ಲದ ದಿನವಿಡೀ ನಾನು ಮನೆಯ ದೂಳು ಹೊಡೆಯುತ್ತ ಉಳಿದುಬಿಟ್ಟೆ. ಮಧ್ಯೆ ಮಧ್ಯೆ ನಿನ್ನ ನಂಬರ್ ಒತ್ತುವುದು ನಡೆದೇ ಇತ್ತು. ಹಾಳು ಗಂಟಲಿನ ಹುಡುಗಿಮತ್ತೆ ಮತ್ತೆ, ’ನೀವು ಕರೆ ಮಾಡಿದ ಚಂದಾದಾರ….’ ಅವತ್ತಿಂದ ನಾನೂ ಹುಚ್ಚಿಹಾಗೆ ಗಂಟೆಗೊಂದು ಸಾರ್ತಿ ನಿನಗೆ ಕಾಲ್ ಮಾಡ್ತಲೇ ಇದ್ದೀನಿ. ಆದರೂ ಅವಳು ಮಾತ್ರ ಹಾಗೆ ಬಡಕೊಳ್ಳೋದು ನಿಲ್ಲಿಸಿಲ್ಲ.

ಆವತ್ತು ನಾನು ಅಮ್ಮ ಸಾಯ್ತೀನಂದ್ರೂ ಕೇಳದೆ ನಿನ್ನ ಹಿಂದೆ ಬಂದುಬಿಟ್ಟಿದ್ದೆ. ಮದುವೆಯಾಗೋದು ನಮ್ಮ ಉದ್ದೇಶವಲ್ಲ ಅಂದಾಗಲಂತೂ ಅಪ್ಪ ಗಂಟಲು ಕಿತ್ತುಬರುವ ಹಾಗೆ ಕೂಗಾಡಿದ್ದ.

ಈವತ್ತಿಗೆ ನಾಲ್ಕು ತಿಂಗಳಾಯ್ತು, ನೀನು ವ್ಯಾಪ್ತಿಪ್ರದೇಶದ ಹೊರಗೆ ಹೋಗಿಇಷ್ಟೂ ದಿನ ಮಾತಾಡದ ಅಪ್ಪ, ’ಏನು ಸಾಧಿಸಿದೆ ಮಗಳೇ ಅಂದರೆ, ಅಮ್ಮ, ’ನಿಂಗೆ ಇನ್ನು ಯಾರು ದಿಕ್ಕು?’ ಕೇಳ್ತಿದ್ದಾಳೆಬರೀ ಇಂಥವೇ…. ಆದರೆ ನಾನು ಮಾತ್ರ ಪ್ರಶ್ನೆಯನ್ನ ಯಾವತ್ತೂ ಕೇಳಿಕೊಳ್ಳಲೇ ಇಲ್ಲ. ನಾ ನಿನ್ನ ಆಸರೆಗಾಗಿ ಅವಲಂಬಿಸಲಿಲ್ಲ. ನಿನ್ನ ಸಂಬಂಧದ ಸರ್ಟಿಫಿಕೇಟು ಹಿಡ್ಕೊಂಡು ಮೆರಿಯೋದೂ ನಂಗೆ ಬೇಕಿರಲಿಲ್ಲ. ನೀನು ಬೇಕು, ನಿನ್ನೊಡನಿರಬೇಕೆಂಬ ಅದೆಂಥದೋ ಉನ್ಮಾದವಷ್ಟೇ ನನ್ನಲ್ಲಿದ್ದದ್ದು. ಅದು, ಇವರ್ಯಾರಿಗೂ ಅರ್ಥವಾಗೋಲ್ಲ.

ನನಗೆ ಗೊತ್ತು. ನೀನು ಹಾಗೆ ಹೊರಟುಬಿಡಲು ಕಾರಣವೇನು ಅಂತಬಿಡು. ಬಂದೂಕು ಹಿಡಿದು ಕಾಡಲ್ಲಿ ಮೈ ತರಚಿಕೊಂಡ್ರೆ ಕ್ರಾಂತಿಯಾಗೋಲ್ಲ! ನಿನಗೆ ನಾನು ಪಾಠ ಹೇಳ್ಬೇಕಾ? ಆದರ್ಶದ ಬೆನ್ನು ಹತ್ತಿದರೆ ಯಾವತ್ತೂ ಹೀಗೇ ಆಗೋದು

ಈಗ ಪೇಪರ್ ನೋಡಿದೆ. ಕಾಡೊಳಗೆ ಎಸ್ ಟಿ ಎಫ್ ನುಗ್ಗಿಸ್ತಾರಂತೆ. ಯಾರ ಗುಂಡು ಯಾರ ಎದೆಗೋ? ಸುಮ್ಮನೆ ಕಾಡಬೇಡ. ನೀನು ಹಾಗೆಲ್ಲ ಇಲ್ಲವಾಗೋದು ನಂಗೆ ಬೇಕಿಲ್ಲ.

ಈಗ ನಿನ್ನ ಫೋಟೋ ನನ್ನ ಎದೆಯ ಮೇಲೆ. ನೀನು…. ಎದೆಯೊಳಗೆ. ಅಂದ ಹಾಗೆ ಇದು ನೀನಿಲ್ಲದ ಕೊನೆಯ ಭಾನುವಾರ. ಹಾಗೇ , ನನ್ನ ಕಟ್ಟಕಡೆಯದು ಕೂಡಾ. ನಾನೀಗ ಹೊರಟೆ.

ನೀನು ಕಾಡಲ್ಲಿ ಅಲೆದಿದ್ದು ಸಾಕು. ಇಲ್ಲೂ ಪರಿವರ್ತನೆಗಳಿಗೆ ಅವಕಾಶಗಳಿವೆ.

ಪ್ಲೀಸ್…. ಇನ್ನಾದರೂ ವ್ಯಾಪ್ತಿ ಪ್ರದೇಶದ ಒಳಗೆ ಬಾ…. ಪ್ರಾಮಿಸ್! ನಾನು ಇನ್ಯಾವತ್ತೂ (ಕರ) ಕರೆ ಮಾಡೋಲ್ಲ!!

17 thoughts on “ಇನ್ನಾದರೂ ವ್ಯಾಪ್ತಿ ಪ್ರದೇಶದ ಒಳಗೆ ಬಾ…

Add yours

  1. ನಕ್ಸಲೀಯರ ಬಗ್ಗೆ ತುಂಬಾ ಬರೀತಾ ಇದ್ದೀರಲ್ಲ… !?

    ಆದರೂ ಈ ನಿಮ್ಮ ಕಥೆಗಳು ಅವರ ಮನಃಪರಿವರ್ತನೆ ಮಾಡುವಂತೆ ಇರುತ್ತಿರುವುದು ಸಂತೋಷ.. ಅವರೂ ಇವುಗಳನ್ನು ಓದುವಂತಾಗಲಿ.

  2. ಈ ಥರಾ ಎಲ್ಲಾ ಬರ್ದಾಕಿದ್ರೆ… ನಾವ್ ಸುಮ್ನಿರಲ್ಲ… ಮತ್ತೆ ಮತ್ತೆ ಓದ್ತೀವಿ ಅಂತ ಹೆದರಿಸ್ತೀವಿ. ವಾಚ್ಯಾರ್ಥವೇ ಇಷ್ಟು ಜೋರಿದೆ… ಹಾಗಾದ್ರೆ ಭಾವಾರ್ಥ…? ಯೋಚಿಸಲೂ ಹೋಗಲ್ಲಪ್ಪ….!!! ಮನಸ್ಸು ಆರ್ದ್ರವಾಗಿಬಿಡಬಹುದೂಂತ ಭಯ.

    ಅಂದ ಹಾಗೆ ಇದು ನೀನಿಲ್ಲದ ಕೊನೆಯ ಭಾನುವಾರ. ಹಾಗೇ , ನನ್ನ ಕಟ್ಟಕಡೆಯದು ಕೂಡಾ. ನಾನೀಗ ಹೊರಟೆ.

    ಹೇಗೆ?

  3. ಅನ್ವೇಷಿಗಳೇ,
    ವೆಲ್ಕಮ್ಮು…
    ಹಾಗೇನೇ ತುಂಬಾ ತುಂಬಾ ಥ್ಯಾಂಕ್ಸೂ… ಕಮೆಂಟಿಸಿದ್ದಕ್ಕೆ…
    ಬರ್ತಾ ಇರಿ. ನಾನು ನಿಮ್ಮ ಅಭಿಮಾನಿ.

    ನಲ್ಮೆ,
    ಚೇತನಾ

  4. ಚೇತನಕ್ಕ, ತುಂಬಾ ದಿನಗಳ ನಂತರ ನಿಮ್ಮ ಕಥೆ ಓದ್ತಾ ಇದೀನಿ, ನೀವು ಬ್ಯುಸಿಯಾಗಿಬಿಟ್ಟ್ರಿ ಅನ್ನಿಸತ್ತೆ…ದಯವಿಟ್ಟು ಫೋನು ಕೆಳಗಿಟ್ಟು ಜಾಸ್ತಿ ಕಥೆ ಬರೀರಿ 🙂
    ಶ್ಯಾಮು

  5. ರಮೇಶ್, ಯಾಕಪ್ಪಾ ಹೊಟ್ಟೆಕಿಚ್ಚು?
    ವಿಕಾಸ್, ಸಲ್ಯೂಟ್ ಸಿಗ್ತಂತಾ?
    ಕೃಷ್ಣ ಮೂರ್ತಿ, ಶ್ರೀ, ತುಂಬಾ ಥ್ಯಾಂಕ್ಸ್. ಮೆಚ್ಚಿದ್ದಕ್ಕೆ, ಕಮೆಂಟಿಸಿದ್ದಕ್ಕೆ.

    ನಲ್ಮೆ,
    ಚೇತನಾ

  6. ಹಯ್ಯೋ ಹೊಟ್ಟೆಕಿಚ್ಚಲ್ಲ.. ಹೊಟ್ಟೆಗಾಗಿ ಕರುಣೆ!

    ಇಲ್ಲಿ ಬಂದು ಏನ್ ಮಾಡ್ತನೆ.. ಯಾವ ಕೆಲ್ಸನೂ ಸಿಗಲ್ಲ..
    ಇರೋ ಕೆಲಸಗಳಿಗೇ ಸಂಚಕಾರ ವಕ್ಕರಿಸಿಬಿಟ್ಟಿದೆ..

    ಅವನ ಜೊತೇಲಿ friendship ಮಾಡ್ಕೊಳೊಣಾ ಅಂತ ಸ್ಕೆಚ್ ಹಾಕಿದ್ದೀನಿ..
    ಯಾಕಂದ್ರೆ ಕೆಲಸ ಏನಾದ್ರೂ ಡಮಾರ್ ಆದ್ರೆ, ಗನ್ ಹಿಡ್ಕೊಂಡು ಕಾಡಲ್ಲಿರೋ ಹಂದಿ, ಜಿಂಕೆ, ಮೊಲ ಇವುನೆಲ್ಲಾ ಬೇಟೆಯಾಡಿ ತಿಂದು ತೇಗಿ ಕಾಲ ಮಾಡಬಹುದಲ್ಲಾ.. 😉

  7. ಚೇತನಾ, ಮೊದಲ ಸಲ ನಿಮ್ಮ blog ನೋಡಿದೆ, ಓದಿದೆ. ಇಷ್ಟು ಚಿಕ್ಕ ಕತೆಯಲ್ಲಿ ಅದೆಷ್ಟು ಭಾವನೆಗಳನ್ನು, ವಿಚಾರಗಳನ್ನು ತುಂಬಿಸಿದ್ದೀರಿ! “ನಾ ನಿನ್ನ ಆಸರೆಗಾಗಿ ಅವಲಂಬಿಸಲಿಲ್ಲ. ನಿನ್ನ ಸಂಬಂಧದ ಸರ್ಟಿಫಿಕೇಟು ಹಿಡ್ಕೊಂಡು ಮೆರಿಯೋದೂ ನಂಗೆ ಬೇಕಿರಲಿಲ್ಲ. ನೀನು ಬೇಕು, ನಿನ್ನೊಡನಿರಬೇಕೆಂಬ ಅದೆಂಥದೋ ಉನ್ಮಾದವಷ್ಟೇ ನನ್ನಲ್ಲಿದ್ದದ್ದು. ಅದು, ಇವರ್ಯಾರಿಗೂ ಅರ್ಥವಾಗೋಲ್ಲ..” ಈ ಸಾಲುಗಳು ಅದೆಷ್ಟು ಮೆಚ್ಚುಗೆಯಾದವೆಂದರೆ ಅವನ್ನು ನನ್ನ diaryನಲ್ಲಿ ಬರೆದಿಟ್ಟುಕೊಂಡಿದ್ದೀನಿ.. ಬೇಕೆನಿಸಿದಾಗಲೆಲ್ಲ ಓದಿಕೊಳ್ಳೋಕೆ. ಹೀಗೇ ಬರೆಯುತ್ತಿರಿ..

    ~ಪದ್ಮಿನಿ

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑