ಹೊಸ ವರ್ಷದ ಹೊಸ್ತಿಲಲ್ಲಿ ನನ್ನ ಕನವರಿಕೆಗಳು…


ಅರೆರೆ!! ಕಣ್ಣೆದುರೇ ತಪ್ಪಿಸ್ಕೊಳ್ತಿದಾನೆ ಕಳ್ಳ… ಹಿಡಿಯಲಿಕ್ಕಾಗೋಲ್ಲ:( ಈ ವರೆಗೆ ಅವನನ್ನ ಹಿಡಿದವರು, ತಡೆದವರು ಯಾರಾದರೂ ಇದ್ದಾರಾ? ನಮ್ಮ ದಿನದಿನದ ಆಯಸ್ಸನ್ನ ಕದ್ದು ಓಡುತ್ತಲೇ ಇರುವ ಇವನ ಬೆನ್ನು ಹತ್ತಿ ಗೆದ್ದವರು ಯಾರು? ಆಫೀಸಲ್ಲಿ ಹೊಸ ಡೈರಿ ಕೊಟ್ಟರು. ವರ್ಷ ಮುಗಿಯುತ್ತಿದೆ ಅಂದರು. ಮೊಬೈಲಿನ ತುಂಬ ಅಡ್ವಾನ್ಸ್ ಮೆಸೇಜುಗಳು… ೨೦೦೮ಕ್ಕೆ ಟಾಟಾ, ೨೦೦೯ಕ್ಕೆ ವೆಲ್ ಕಮ್! ಮೊನ್ನೆ ಮೊನ್ನೆ ಹೊಸ ವರ್ಷದ ಶುಭಾಶಯ ಹೇಳಿದ್ದ ನೆನಪು. ಏನೆಲ್ಲ ಆಗಿಹೋಯ್ತು ಈ ವರ್ಷದಲ್ಲಿ? ನಾನು ಹೆಚ್ಚು ಕಾಯಿಲೆ ಬೀಳಲಿಲ್ಲ (ಅಮ್ಮನ ಪ್ರಕಾರ ಶನಿ ಕಾಟ ಮುಗಿದಿತ್ತು!). ಸಮಾ ಊರೂರು ಸುತ್ತಾಡಿದೆ. ಜಗಳ ಕಮ್ಮಿ ಮಾಡಿದೆ. ಅಣ್ಣನ ಹತ್ತಿರ ಬಯ್ಸಿಕೊಂಡಿದ್ದು ವಿಪರೀತ. ನಾನೇನೂ ಚೌತಿಯ ದಿನ ಚಂದ್ರನ್ನ ನೋಡಿರಲಿಲ್ಲ. ಆದರೂ ವಾದ ವಿವಾದಗಳು ಬಂದು ಬಂದು ಸುತ್ತಿಕೊಂಡವು (ನಂಬಿ… ನನ್ನ ತಪ್ಪಿಲ್ಲ 🙂 ). ನನ್ನದೊಂದು ಬುಕ್ಕು ಬಿಡುಗಡೆಯಾಯ್ತು. ಒಂದಲ್ಲ, ಎರಡು… ಮನೆ ಮೇಲೊಂದು ಮಂದಿರವಾಯ್ತು. ಒಳಗಿನ ಭಗವಂತ ಎಲ್ಲೋ ಪ್ರವಾಸ ಹೊರಟುಬಿಟ್ಟ. ಹುಡುಕಿ ತಂದು ಮತ್ತೆ ಕೂರಿಸಬೇಕು ಅವನನ್ನ. ಅವನಿಲ್ಲದೆ ಒಂದಷ್ಟು ಶತ್ರುಗಳ ಉದಯವಾಯ್ತು. ಮಗು ಮತ್ತಷ್ಟು ದೂರವಾಯ್ತು. ಬಿಡಿ, ಒಂದಷ್ಟು ಹೊಸ ಗೆಳೆಯರು ಸಿಕ್ಕರು. ಹಳೆ ಗೆಳೆಯರು ಹೊಸತಾದರು. ಒಂದೊಮ್ಮೆ ಮನಸ್ಸು ಉಯ್ಯಾಲೆಯಾಗಿ ತೂಗಿದ್ದು ನಿಜ. ಬದುಕು ಕಲಿಸಿದ ಪಾಠ ನೆನಪಿತ್ತು ಸಧ್ಯ! ಉಯ್ಯಾಲೆಯ ಸರಪಣಿಯನ್ನೇ ಬಿಚ್ಚಿ ಎತ್ತಿಟ್ಟೆ. ಹಾಯ್ಕು ಬರೆಯೋದು ಕಲಿತೆ. ಕಥೆ ಬರೆಯೋದು ಮರೆತೆ. ಕವಿತೆ ಅಂದರೇನು ಯೋಚಿಸುತ್ತ ಕುಳಿತೆ. ಎಷ್ಟೊಂದು ಬುಕ್ಕು ಓದಿದೆ! ಮತ್ತಷ್ಟು ಕೊಂಡು ಕಪಾಟಲ್ಲಿರಿಸಿದೆ. ಸಿಕ್ಕರೆಲ್ಲಾದರೂ ಕಾಲ ಕೊಂಡು ತರಬೇಕು. ಹಾಗೆಂದಾಗ ಯಾಕೋ ಹಿರಿಯರು ಬಿದ್ದುಬಿದ್ದು ನಕ್ಕರು!! ಬೊಗಸೆಯಲ್ಲಿರುವ ಜೊಳ್ಳು ಗಟ್ಟಿಗಳ ನಿರ್ಧಾರವಾಯ್ತು. ಜೊಳ್ಳನೆಲ್ಲ ಊದಿ ಹಾರಿಸಿಬಿಟ್ಟೆ. ದೇಶದಲ್ಲಿ ಮತ್ತೆ ಮತ್ತೆ ಸ್ಫೋಟಗಳಾದವು. ಒಂದಷ್ಟು ಅಮಾಯಕರ ಪ್ರಾಣ ಹೋಯ್ತು. ಹ್ಹ್! ನಾನಂತೂ ಬದುಕಿ ಉಳಿದೆ. ಕಳೆದ ವರ್ಷದಲ್ಲಿ ನಾನು ಒಂದು ಸಾರ್ತಿಯೂ ಕೋಗಿಲೆ ಹಾಡು ಕೇಳಲಿಲ್ಲ. ಮೈದಡವಿ ಮುದ್ದಾಡಲೊಂದೂ ಕರು ಕಾಣಿಸಲಿಲ್ಲ. ಕಾಲು ಕಾಲು ಸುತ್ತಿ ಬಂದ ಬೀದಿ ನಾಯಿ ಮರಿಗೆ ಯಾಕೋ ನಾನು ಊಟವೇ ಹಾಕಲಿಲ್ಲ. ಅಡುಗೆ ಮಾಡುವುದು ಜಾಣಮರೆವಾಯ್ತು. ಒಂದಷ್ಟು ತೂಕ ಇಳಿಯಿತು! ತಮ್ಮನ ಹೆಂಡತಿ ಬಾಣಂತನಕ್ಕೆ ಹೋಗಿ, ನನ್ನ ಕೈಗೆ ಸಿಕ್ಕ ಅವನ ತೂಕವನ್ನೂ ಇಳಿಸಿಬಿಟ್ಟೆ. ಮನೆಯ ಇಂಟರ್ ನೆಟ್ ತೆಗೆಸಿದೆ. ಬ್ಲಾಗ್ ಒಮ್ಮೆ ಮುಚ್ಚಿ, ಮತ್ತೆ ತೆರೆದೆ. ಒಂದಷ್ಟು ಜನರ ಗಂಟಲಲ್ಲಿ ಮುಳ್ಳು… ಪಾಪ, ಇನ್ನೂ ಒದ್ದಾಡ್ತಲೇ ಇದ್ದಾರೆ! ನನಗಂತೂ ಸಾಕಷ್ಟು ಅವಾರ್ಡುಗಳು ಬಂದವು. ಬೇಸರಪಡುತ್ತಾರೇನು? ಆಫೀಸಲ್ಲಿ ಕೆಲಸ ತನ್ನ ಪಾಡಿಗೆ ತಾನು. ವಾರಕ್ಕೊಮ್ಮೆ ಸಿ.ಡಿ ಹಾಕಿಕೊಂಡು ಸಿನೆಮಾ ನೋಡಿದೆ. ಟಾಕೀಸುಗಳ ಅಡ್ರೆಸ್ ಮರೆತುಹೋಗಿದೆ. ನೆಂಟರ ಮನೆಗಳದ್ದೂ… ಒಮ್ಮೆ ಹುಟ್ಟೂರಿಗೆ ಹೋಗಿಬಂದೆ. ದೊಡ್ಡಮ್ಮ, ಅತ್ತೆ, ಮಾವ, ಚಿಕ್ಕಪ್ಪ… ಸಂಬಂಧಗಳು ಮರೆತು ಹೋಗಿವೆ. ಚಿಕ್ಕಜ್ಜ ಇಲ್ಲವಾದಾಗ ಮುಖ ನೆನಪಾಗದೆ ದುಃಖಪಟ್ಟೆ. ಹೊಸತೊಂದಷ್ಟು ಹುಡುಗರು ಅಕ್ಕಾ ಅಂದಾಗ ಸಂಭ್ರಮಪಟ್ಟೆ. ಈ ಬಾರಿಯ ಹೆಚ್ಚಿನ ಭಾನುವಾರಗಳು ಹುರುಳಿಲ್ಲದೆ ಕಳೆದುಹೋಗಿದ್ದಕ್ಕೆ ಇನ್ನೂ ಬೇಸರವಿದೆ. ಮುಂದಿನ ದಿನಗಳು ಹೀಗೇ ಇರಬೇಕು ಅಂತ ನಿರ್ಧಾರ ಮಾಡಿ ವಿಧಿಗೆ ಚಾಲೆಂಜು ಹಾಕಿದೆ. ಬಹುಪಾಲು ಗೆದ್ದೆ. ಅಂವ ಪಾಪ ಅನ್ನಿಸಿ ಕೊಂಚ ಸೋತೆ.
ಇದೀಗ ಹೊಸ ವರ್ಷ. ಕಳ್ಳ! ಹೊಂಚುಹಾಕಿ ನಡೆಯುತ್ತಲೇ ಇದ್ದಾನೆ. ಮತ್ತೊಂದು ವರ್ಷ ನುಂಗುತ್ತಾನೆ. ನಿಂತಲ್ಲೆ ನಿಲ್ಲುತ್ತ ಸಾವಿನ ಬಾಗಿಲಿಗೆ ಹತ್ತಿರವಾಗುತ್ತೇವೆ. ನಡೆಯುತ್ತಲೇ ಇರುವವರು ಸತ್ತೂ ಉಳಿದುಹೋಗುತ್ತಾರಂತೆ. ನಡೆಯಬೇಕೆಂದು ಅಂದುಕೊಳ್ಳುತ್ತಿದ್ದೇನೆ. ಮಾಡಲೇಬೇಕೆಂದ ಕೆಲಸಗಳ ಪಟ್ಟಿ ಮಾಡಿಟ್ಟುಕೊಂಡಿದ್ದೇನೆ. ಮೋಸ ಹೋಗಬಾರದೆಂದು ಪಣ ತೊಟ್ಟಿದ್ದೇನೆ. ಮತ್ತಷ್ಟು ಗಟ್ಟಿಯಾಗಬೇಕೆಂದು, (ಬ್ಲಾಗೇಶ್ವರನ ಆಣೆಯಾಗಿ ಬ್ಲಾಗನ್ನಂತೂ ಮುಚ್ಚಲೇಬಾರದೆಂದು ! 🙂 ) ಕಾಲನಿಗೆ ಕದಿಯಲು ಬಿಡದೆ, ನನ್ನ ದಿನಗಳನ್ನ ನಾನೇ ಕಳೆಯಬೇಕೆಂದು ಪ್ರತಿಜ್ಞೆ ಮಾಡಿಕೊಂಡಿದೇನೆ. ಹಳೆಯ ಚೇತನಾ ಹೊಸ ಚೈತನ್ಯದೊಂದಿಗೆ ೨೦೦೯ನ್ನು ನೂರೆಂಟು ನಿರ್ಧಾರ, ಭರವಸೆಗಳೊಂದಿಗೆ ಸ್ವಾಗತಿಸುತ್ತಿದ್ದಾಳೆ. ನೀವೆಲ್ಲ ಹಾರೈಸುತ್ತೀರಲ್ಲವೆ?

ಎಲ್ಲರಿಗೂ… ಅಂದರೆ, ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಿಶಗಳು.

ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ.

10 thoughts on “ಹೊಸ ವರ್ಷದ ಹೊಸ್ತಿಲಲ್ಲಿ ನನ್ನ ಕನವರಿಕೆಗಳು…

Add yours

  1. ನಾರ್ಮಲ್ ಆಗಿ ನಿಮಗನಿಸಿದ್ದನ್ನ , ಭಯಂಕರ ಸಿಂಪಲ್ ಆಗಿ ಬರಿತೀರಲ್ಲ (ಯಾವುದೇ ಹೈ ಸೌಂಡಿಂಗ್ ಶಬ್ಧವಿಲ್ಲದ), ಅದು ನನಗೆ ಸ್ವಲ್ಪ ಹೊಟ್ಟೆ ಉರಿ 😦
    Happy New year

    -Prasad

  2. ಚೇತನ ಅವರೇ, ಹೊಸ ವರ್ಷದ ಹಾರ್ದಿಕ ಶುಭಾಷಯಗಳು.
    ನಿಮ್ಮ ಬರಹಗಳಿಂದ ಪ್ರಭಾವಿತನಾಗಿ ನಾನೂ ಸಹ ಕನ್ನಡದಲ್ಲಿ ಬರೆಯಬೇಕೆಂದು ನಿಶ್ಚಯಿಸಿದ್ದೇನೆ. ನಿಮ್ಮ ಬರಹದ ಶೈಲಿ, ಸರಳತೆ ಇವೆಲ್ಲ ತುಂಬಾ ಪ್ರಭಾವ ಬೀರಿವೆ. ಹೊಸ ವರ್ಷದಲ್ಲಿ ಹೀಗೆ ನಿಮ್ಮ ಬರವಣಿಗೆ ಮುಂದುವರಿಯಲಿ ಎಂದು ಆಶಿಸುವೆ.

  3. ಚೇತನಾರವರಿಗೆ ನನ್ನ ನಮಸ್ಕಾರಗಳು..

    ನಾನು ಕಿರಣ ಅ೦ತ… ಯಾರದೋ ಲಿಂಕ್ ಕ್ಲಿಕ್ ಮಾಡಿದಾಗ ನಿಮ್ಮ ಬ್ಲಾಗ್ ನ ದರ್ಶನವಾಯ್ತು… ಓದಿ ಹೇಳಲಾಗದಷ್ಟು ಆನ೦ದವಾಯ್ತು… ನನ್ನ ಭಾವನೆಗಳನ್ನೇ ನಿಮ್ಮ ಬರಹದಲ್ಲಿ ಮತ್ತೆ ಮತ್ತೆ ಓದಿದೆ… ಬರವಣಿಗೆಯ ಶೈಲಿ ಬಹು ಸು೦ದರ..

    ಧನ್ಯವಾದಗಳು,
    ಕವಿಕಿರಣ.

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑