ಹೂವಿನ ಕಣಿವೆಗೆ ಮುಳ್ಳಿನ ಹಾದಿ


ಅವಳು ಹೊಕ್ಕುಳ ಹೂವಿಲ್ಲದ ಹುಡುಗಿ.
ನಿಜಕ್ಕೂಅವಳಿಗೆ ಹೊಕ್ಕುಳಿಲ್ಲ. ಹಾಗಂದ ಮೇಲೆ ಅವಳು ಹುಟ್ಟಿಬಂದವಳಲ್ಲ. ಅವಳು ಇರುವವಳು. ಯಾವತ್ತಿಗೂ…
ಅವಳು ಕನಸಿಂದ ಧಿಗ್ಗನೆ ಎದ್ದುಬಂದಳು. ಉಷ್ಣ ಇದೆ ಎಂದಾದರೆ ಅಲ್ಲಿ ಜ್ವಾಲೆ ಹೊತ್ತಿಕೊಂಡಿರಲೇಬೇಕು ತಾನೆ? ತಾನು ‘ಉಷ್ಣ’ ಇದ್ದೀನಿ. ಎಲ್ಲಿ ನನ್ನ ಜ್ವಾಲೆ? ಕನಸುಗಳಲ್ಲಿ ತಬ್ಬಿಹಿಡಿಯುವ ಆ ಗಂಡು ಬೆಂಕಿ…? ಎನ್ನುತ್ತ ಅಲೆಮಾರಿಯಾದಳು.
ಕೊನೆಗೂ ಅವಳಿಗೆ ಆ ಬೆಂಕಿ ಸಿಕ್ಕಿದ್ದು ಹಿಮಬೆಟ್ಟದ ಮೇಲೆ, ಲೂಟಿಕೋರರ ನಾಯಕನ ಕಣ್ಣುಗಳಲ್ಲಿ. ಅವನ ಹೆಸರೂ ಅದೇನೇ- ಹಿಂದಿಯಲ್ಲಿ, ಜಲನ್!
ಜಲನ್ ಮತ್ತವನ ತಂಡದ ಎಲ್ಲರೂ ತಮ್ಮತಮ್ಮ ಊರುಗಳಿಂದ ಹೊರಹಾಕಲ್ಪಟ್ಟವರು. ಅವರದು ಬರೀ ಕೊಳ್ಳೆ ಹೊಡೆಯೋ ಕೆಲಸವಲ್ಲ. ಅವರು ಮತ್ತೇನೋ ಮಾಡಲಿಕ್ಕಿದೆ. ಹಾಗಂತ ಅವನ ಮಾತಿನೊಂದು ಸಾಲು ಸುಳಿವುಕೊಟ್ಟು ಸುಮ್ಮನಾಗುತ್ತೆ.
ಅವರ ತಂಡಕ್ಕೆ ಬಂದು ಸೇರುವ ಹೊಕ್ಕುಳಿಲ್ಲದ ಹುಡುಗಿ ಜಲನ್ ನಿಗೆ, ‘ನೀನೇ ನನ್ನ ಕನಸಲ್ಲಿ ಬರ್ತಿದ್ದವನು, ನನ್ನ ಕರೆದ್ಕೊಂಡು ಹೋಗು’ ಅಂತಾಳೆ. `ನಾನು ನಿನಗೆ ಉಪಯೋಗವಾಗ್ತೀನಿ’ ಅಂತಲೂ ಹೇಳ್ತಾಳೆ. ಅಂವ ಮೊದಲ ರಾತ್ರಿ ಹಾಗೆ ‘ಉಪಯೋಗಿಸ್ಕೊಳ್ತಾನೆ’ ಕೂಡಾ. ಮಾರನೆ ಬೆಳಗ್ಗೆ ಒಂದು ಕುದುರೆ, ಸ್ವಲ್ಪ ಸಾಮಗ್ರಿ ಕೊಟ್ಟು ಜಾಗ ಖಾಲಿ ಮಾಡು ಅನ್ನುತ್ತಾನೆ ಗಂಡಸು. ಮೊದಲು ನಿರಾಕರಿಸುವ ಅವಳು, ತಂಡದ ಮಿಕ್ಕೆಲ್ಲರ ಮಾತು ಚುಚ್ಚಿ ಹೊರಟು ನಿಲ್ತಾಳೆ. ಅದಕ್ಕೆ ಮುಂಚೆ ಜಲನ್ ನ ಕಿವಿಯಲ್ಲಿ ‘ನಿನ್ನೆ ರಾತ್ರಿಗೆ ಮೊದಲು ನಾನು ಕನ್ನೆಯಾಗಿದ್ದೆ’ ಅಂತ ಪಿಸುಗುಟ್ಟುತಾಳೆ. ಅವನು ಆ ನಿಜದ ಸವಿ ಅನುಭವಿಸ್ತ ಇರುವಾಗಲೇ ಅವಳು ಕುದುರೆಯೇರಿ ನಾಲ್ಕು ಹೆಜ್ಜೆ… ಅಂವ ಅವಳನ್ನ ಹಿಂಬಾಲಿಸಿ ತಡೀತಾನೆ. ಇದರ ಮುಂದೆ, ಆ ಲೂಟಿಕೋರರ ತಂಡದಲ್ಲೊಂದು ಹೆಣ್ಣಿನ ಸೇರ್ಪಡೆಯಾಗತ್ತೆ.
ಉಷ್ಣಾ ಅವಳ ಹೆಸರು. ಹೇಳಿದಂತೆ, ಜಲನ್ ನ ತಂಡಕ್ಕೂ ಉಪಯೋಗಕ್ಕೆ ಬರ್ತಾಳೆ, ಅವರಿಗೆ ಕೊಳ್ಳೆಯ ಬೇರೆಬೇರೆ ದಾರಿ ತೋರಿಸೋ ಮೂಲಕ.
ರೂಢಿಯೆನ್ನುವ ಹಾಗೆ, ಹಕ್ಕೆನ್ನುವ ಹಾಗೆ, ಪ್ರತಿ ರಾತ್ರಿ ಬಂದು ಅವಳ ತೊಡೆ ಸರಿಸುತ್ತಿದ್ದ ಜಲನ್, ಅವತ್ತೊಂದು ರಾತ್ರಿ ಹಾಗೆಯೇ ಮಗ್ಗುಲಾಗುತ್ತಾನೆ. ನನಗಿದು ಬೇಡ. ನಾನು ನಿನ್ನನ್ನ ಕಣ್ತುಂಬಿಕೊಳ್ಬೇಕು ಅನ್ನುತ್ತಾನೆ. ಕಾಮಕ್ಕಿಂತ ಮುಖ್ಯ- ಪ್ರೇಮ ಬೇಕು! (ಜಗತ್ತಿನೆಲ್ಲ ಹೆಣ್ಣುಗಳ ಪಾಲಿಗೆ ಗಂಡು ಹೇಳುವ ಇದಕ್ಕಿಂತ ಮಧುರವಾದ ಮಾತು ಇದ್ದೀತೆ!?)
ಅವಳ ಮೈಯುದ್ದಕ್ಕೆ ಆಡುವಾಗ ಅವನಿಗೆ ಅಚ್ಚರಿ. ಅರೆ! ನಿನಗೆ ಹೊಕ್ಕಳೇ ಇಲ್ಲ!! ಹೊಕ್ಕಳಿಲ್ಲದೆ ನೀನು ಹೇಗೆ ಹುಟ್ಟಿಕೊಂಡೆ? ನಿನ್ನಮ್ಮನ ಹೊಟ್ಟೇಲಾದರೂ ಹೇಗೆ ಉಳಿದಿದ್ದೆ!?
~
ಅವನೊಬ್ಬ ಉರಿಮನದ ಯುವಕ.
ಅವನೊಳಗೆ ತಂಪೆನ್ನುವುದೇ ಇಲ್ಲ. ಏನೋ ಒಂದು ದಳ್ಳುರಿ ಹೊತ್ತಿಕೊಂಡು ಬದುಕನ್ನೆಲ್ಲ ಬಾಧಿಸುತ್ತಿದೆ. ಅದಕ್ಕೇ ಅವನ ಕಣ್ಣೊಳಗೆ ಪ್ರೇಮವಿಲ್ಲ.
ಅವನಿಗೆ ಕೊಳ್ಳೆ ಹೊಡೆಯೋದೇ ಕೆಲಸ. ಕೊಡಲು ಏನೂ ಇಲ್ಲ ಅನ್ನುತ್ತಾನೆ ಒಬ್ಬ ಮುದುಕ. ನೀನೇನು ಕೆಲಸ ಮಾಡ್ತೀ? ಅನ್ನುವ ಪ್ರಶ್ನೆಗೆ ‘ನಾನೊಬ್ಬ ಗಾಯಕ’ ಅನ್ನೋ ಉತ್ತರ. ಆ ಗೌಜಿಯಲ್ಲೂ ಗಾಬರಿಯಲ್ಲೂ ‘ಹಾಗಾದರೆ ಹಾಡೀಗ’ ಅನ್ನುತ್ತ ಬೆದರಿಸುತ್ತಾನೆ ಜಲನ್. ಅವನಿಗೆ ಕರುಣೆ ಅಂದರೇನೆಂದೇ ಗೊತ್ತಿಲ್ಲ.
ಇವನ ಓಟದ ದಾರಿಗೆ ತಿರುವಾಗಿ ಬರುತ್ತಾಳೆ ಉಷ್ಣಾ. ಒಂದು ಘಟನೆಯ ನಂತರ ಅವನು ತಂಡದಿಂದ ಬೇರೆಯಾಗುತ್ತಾನೆ. ಉಷ್ಣಾ ಮತ್ತು ಅವನು- ಇಬ್ಬರೇ ಜತೆಯಾಗುತ್ತಾರೆ. ಅವಳಿಗೆ ಅವನನ್ನ ‘ಹೂವಿನ ಕಣಿವೆ’ಗೆ ಕರೆದೊಯ್ಯುವ ಹಂಬಲ. ಬದುಕಂದರೇನು ಗೊತ್ತಾ? ಗೊತ್ತಾಗಬೇಕಂದರೆ ಒಮ್ಮೆ ಪ್ರೀತಿಸಿ ನೋಡು- ಅನ್ನುವ ಹಾಡಿನ ಪಾಠ.
ಆದರೆ ಹೂವಿನ ಕಣಿವೆ ದಿಕ್ಕಿನ ದಾರಿಯುದ್ದಕ್ಕೆ ಮುಳ್ಳಿನ ಚಾಪೆ. ಯೇತಿಯ ಅಡ್ಡಿ. ಯೇತಿ ಕರ್ಮಾಕರ್ಮಗಳ ಫಲದ ನಿಯಾಮಕನಂತೆ. ನೈತಿಕತೆಯ ಕಾವಲುಗಾರನಂತೆ. ಯೇತಿಯ ಸೈನಿಕರು ಬೆನ್ನಟ್ಟಿದಾಗ ಜಲನ್- ಉಷ್ಣಾ ಬೇರೆಯಾಗುತ್ತಾರೆ. ಬೌದ್ಧ ಭಿಕ್ಷುಗಳ ಸುಪರ್ದಿಯಲ್ಲಿ ಜಲನ್ ಚಿಕಿತ್ಸೆ ಪಡೆದು ಏಳುವ ಹೊತ್ತಿಗೆ ಉಷ್ಣಾ ಅವನನ್ನ ಹುಡುಕಿಕೊಳ್ತಾಳೆ. ಈ ಹೊತ್ತಿಗೆ ಬೌದ್ಧ ವಿಹಾರದಲ್ಲಿ ಅವನಿಗೆ ‘ಮೌನ ಕಣಿವೆ’ಯ ವಿಷಯ ಗೊತ್ತಾಗಿರುತ್ತೆ. ಹೂವಿನ ಕಣಿವೆಗೆ ಮುನ್ನ ಅಲ್ಲಿಗೆ ಹೋಗಿ ನಿತ್ಯತೆಯ ಮದ್ದು ಕುಡಿಯೋಣ ಅನ್ನುತ್ತಾನೆ ಜಲನ್. ಉಷ್ಣಾಗೆ ಇಷ್ಟವಾಗದಿದ್ದರೂ ಪ್ರೇಮಿಗಾಗಿ ಜತೆಯಾಗುತ್ತಾಳೆ. ಸಾಧಕನ ಗುಹೆ ಹೊಕ್ಕು ನಿತ್ಯತೆಯ ಗುಟುಕುಗಳಿರುವ ನಾಳವನ್ನ ಲಪಟಾಯಿಸುತ್ತಾರೆ. ಅವಳಿಗೆ ಕುಡಿಸಿ, ತಾನೂ ಕುಡೀತಾನೆ. ಆ ರಾತ್ರಿ ಅವರದ್ದು ಜೀವಮಾನದ ಅದ್ಭುತ ನಿದ್ದೆ.
ಬೆಳಗ್ಗೆ ಏಳುವ ಹೊತ್ತಿಗೆ ಅವರ ಸುತ್ತ ಬಂದೂಕು ಹಿಡಿದ ಮಂದಿ, ಜತೆಗೆ ಯೇತಿ. ಬೆದರದ ಜಲನ್, ಉಷ್ಣಾಳ ಕೈಗೆ ಪಿಸ್ತೂಲು ಕೊಟ್ಟು ಗುಂಡಿಕ್ಕು ಅನ್ನುತ್ತಾನೆ. ಆ ಗುಂಡಿಗೆ ಅಂವ ಸಾಯೋದಿಲ್ಲ. ಔಷಧದ ಮೇಲಿನ ನಂಬಿಕೆಯಿಂದ ತಾನೂ ಅವಳಿಗೆ ಗುಂಡಿಕ್ಕುತ್ತಾನೆ. ನಿಯತಿಯ ಕರಾಮತ್ತು! ಅವಳು ಸಾಯುತ್ತಾಳೆ.
‘ನಾನು ನಿನ್ನನ್ನ ಕೊಲ್ಲಲು ಬರಲಿಲ್ಲ. ನಿನ್ನ ಶಿಕ್ಷಿಸಲು ಬಂದಿದ್ದೆ. ಈಗ ಇದಕ್ಕಿಂತ ದೊಡ್ಡ ಶಿಕ್ಷೆ ನಿನಗೆ ಯಾವುದಿದ್ದೀತು?’ ಅನ್ನುವ ಯೇತಿ, ಹೆಜ್ಜೆಗೊಂದು ಹೊದಿಕೆ ಕಳಚುತ್ತ ಬೆತ್ತಲಾಗಿ ನಡೆಯುತ್ತಾನೆ, ಕೆಲಸ ಮುಗಿಸಿದವನಂತೆ.
ಉಷ್ಣಾಳ ದೇಹ ಸುಟ್ಟು ನಡೀತಾನೆ ಜಲನ್. ಉಷ್ಣ ಇಲ್ಲದ ಜ್ವಾಲೆ ತಣ್ಣಗೆ ತಾನೆ? ಜಲನ್ ಕೂಡಾ ಈಗ ಹಾಗೇನೆ.
~

Pan Nalin

ಅಲ್ಲಿಂದ ಮುಂದೆ ನೂರಾ ಅರವತ್ತಕ್ಕೂ ಹೆಚ್ಚು ವರ್ಷಗಳ ಓಟ. ಒಂದಿಡೀ ಶತಮಾನವನ್ನ ಜೀವಿಸಿ ಕಳೀತಾನೆ ಜಲನ್. ಅದು ಔಷಧದ ವರ. ಈ ಕಾಲದ ಗತಿಯನ್ನ ನಿರ್ದೇಶಕ ಪಾನ್ ನಳಿನ್ ಅದ್ಭುತವಾಗಿ ನಿರೂಪಿಸಿದ್ದಾರೆ. ಬರೀ ಪಾದಗಳ ಚಲನೆಯನ್ನೆ ತೋರಿಸುವ ಮೂಲಕ.
ಭಾರತದ ಹಿಮಶ್ರೇಣಿಯಿಂದ ಜಲನ್ ನಡೆದು ಸೇರೋದು ಜಪಾನಿಗೆ. ಅದೂ 21ನೆ ಶತಮಾನದ ಆಧುನಿಕ ದೇಶಕ್ಕೆ. ಅವನೀಗ ಡಾ.ಜಲನ್ ಒತ್ಸಲ್. ಸಾವಿನ ವೈದ್ಯ. ಸ್ವತಃ ಸಾಯಲಾರದ ಜಲನ್, ಸಾವು ಬಯಸುವವರಿಗೆ ಮದ್ದು ನೀಡಿ, ನೆಮ್ಮದಿಯಿಂದ ಸಾಯಲು ಸಹಕರಿಸ್ತಾನೆ. ಅದರಿಂದಲೇ ಅವನ ಸುತ್ತ ಗದ್ದಲ, ಪ್ರತಿಭಟನೆಯ ಗಲಾಟೆ.
ಇಂಥದೇ ಗದ್ದಲವೊಂದು ಟೀವಿಯಲ್ಲಿ ಬಿತ್ತರವಾಗುವಾಗ ನೋಡುತ್ತಾಳೆ ಒಬ್ಬಳು ಗಾಯಕಿ. ಹಾಡು ನಿಲ್ಲಿಸಿ, ಪೊಲೀಸರಿಂದ ಬಿಡಿಸಿ ಅವನನ್ನ ಕರೆದೊಯ್ದು ರೈಲು ಹತ್ತಿಸ್ತಾಳೆ,
ಅವನು ಇಳಿದು ಬರುತ್ತಾನೆ.
ಯಾಕಂದರೆ ಅವಳು ಉಷ್ಣಾ. ತನ್ನ ಪ್ರೀತಿಗಾಗಿ ಮತ್ತೆ ಬಂದಿರುವ ಉಷ್ಣಾ!
~
ಇಲ್ಲಿಗೆ ಸಿನೆಮಾ ಮುಗಿಯೋದಿಲ್ಲ. ಒಂದು ಅನೂಹ್ಯ ಸಂಗತಿಯೊಂದಿಗೆ ಅದು ಒಂದಷ್ಟು ಯೋಚನೆಗೆ ಶುರುವಾತು ಮಾಡಿಕೊಟ್ಟುಹೋಗುತ್ತದೆ. ಆ ಕೊನೆಯ ಘಟನೆ, ಕೊನೆಯಲ್ಲಿ ಯೇತಿ ಹೇಳುವ ಪರಮನಿಜವಾದ- ಈ ವರೆಗೆ ಮತ್ತೆಮತ್ತೆ ಕೇಳುತ್ತಲೇ ಇರುವ ಮಾತು- ಈ ಎರಡು ಸೇರಿ, ಇಡಿಯ ಸಿನೆಮಾ ನಮ್ಮನ್ನ ಕಲಕುವ ಹಾಗೆ ಮಾಡುತ್ತವೆ. ಕ್ಲೈಮಾಕ್ಸ್ ಹೇಳೋದಿಲ್ಲ… ಸಿನೆಮಾ ಮಿಸ್ ಮಾಡ್ಕೊಳ್ಬೇಡಿ!
~
ಒಟ್ಟಾರೆ ಇಷ್ಟೇ-
ಹೊಕ್ಕುಳಿಲ್ಲದ ಹುಡುಗಿಗೆ ಹುಟ್ಟಿಲ್ಲ- ಸಾವಿಲ್ಲ.
ಸತ್ತಂತೆ ಕಂಡರೆ- ಅದು ಜ್ವಾಲೆಯನ್ನ ನಂದಿಸೋಕೆ ಮಾತ್ರ.
ಎಲ್ಲಿಂದಲೋ ಶುರುವಾದ ಬದುಕು ಎಲ್ಲಿಯೋ ಮುಗೀಬಹುದು. ಕಗ್ಗಾಡಿನ ಲೂಟಿಕೋರರ ನಡುವಿಂದ, ಆಧುನಿಕ ನಗರದ ನಡುಬೀದಿಯಲ್ಲೂ.
ಯಾವಾಗಲೋ ಶುರುವಾದ ಕತೆ ಯಾವಾಗ ಬೇಕಾದರೂ ಮುಗೀಬಹುದು. ಅಥವಾ ಚಿರಕಾಲ ಮುಂದುವರೀಬಹುದು. ನಮ್ಮ ಪಾತ್ರಕ್ಕೆ ನಾವೆಷ್ಟು ಅಂಟಿಕೊಂಡಿರ್ತೀವಿ ಅನ್ನೋದರ ಮೇಲೆ ಅದರ ನಿರ್ಧಾರ. ನಾವೆಂಬ ದೇಹಕ್ಕೆ ಅಂಟಿಕೊಳ್ಳೊತನಕ ಕರ್ಮ ಸುತ್ತಿಕೊಂಡಿರುತ್ತೆ. ಕರ್ಮ ಸುತ್ತಿಕೊಳ್ಳೋತನಕ ಮತ್ತೆ ಹುಟ್ಟು- ಮತ್ತೆ ಸಾವಿನ ಕತೆ ನಡೀತಲೇ ಇರತ್ತೆ.
ಈ ಹುಟ್ಟು ಸಾವುಗಳ ನಡುವೆ ನಿತ್ಯರಾಗಿ ಉಳಿಯೋ ಹಂಬಲ, ಭ್ರಮೆ. ಹೋರಾಟ, ಪ್ರೇಮ.
ಕೊನೆಗೆ- ಎಲ್ಲವನ್ನೂ ಕಳಕೊಳ್ಳುವುದೆ ಎಲ್ಲವನ್ನೂ ಪಡೆಯುವ ಸುಲಭ ಮಾರ್ಗ ಅನ್ನುವ ಸವಿತಿಳಿವು.
– ಇದು ನನ್ನ ಗ್ರಹಿಕಗೆ ನಿಲುಕಿದಂತೆ, ಒಂದು ಪ್ರ’ಬುದ್ಧ’ ಸಿನೆಮಾ.
~
ಹೇಳಲು ಮರೆಯಬಾರದ್ದು…
ನಿರ್ದೇಶಕ: ಪಾನ್ ನಳಿನ್. (ಈತನಿಗೆ 5 ಸ್ಟಾರ್ ಗಳು. ಸಂಸಾರ ಸಿನೆಮಾದ ನಂತರ ಇದು ಈತನ ಎರಡನೇ ಸಿನೆಮಾ. ಸರಿಯಾಗಿ ಗಮನಿಸಿದರೆ ಈತ ಅಸೀಮ ಸಾಧ್ಯತೆಗಳ ನಿರ್ದೇಶಕ. ಸ್ವತಃ ಸಿನೆಮಾ ಸ್ಕ್ರಿಪ್ಟ್ ಬರೆದಿರುವ ಈತ ಎಂಥಾ ಪರ್ಫೆಕ್ಷನಿಸ್ಟ್ ಅನ್ನೋದು ಸಿನೆಮಾ ನೋಡಿದರೆ ಗೊತ್ತಾಗತ್ತೆ.)
ಹಿಂದಿ ಸಂಭಾಷಣೆ: ಅನುರಾಗ್ ಕಶ್ಯಪ್- ಫುಲ್ ಮಾರ್ಕ್ಸ್. (ಭಾಷೆ: ಹಿಂದಿ, ಕೊನೆಕೊನೆಗೆ ಜಪಾನೀಸ್- ಇಂಗ್ಲಿಷ್)

ನಟವರ್ಗ: ಮಿಲಿಂದ್ ಸೋಮನ್- ಆವರೇಜ್. ಮೈಲೆನ್ ಝಂಪನೋಯ್ ಎಕ್ಸಲೆಂಟ್. ನಾಸಿರುದ್ದಿನ್ ಷಾ- ಸೂಪರ್.

4 thoughts on “ಹೂವಿನ ಕಣಿವೆಗೆ ಮುಳ್ಳಿನ ಹಾದಿ

Add yours

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑