ಒಂದು ಮಡಚಿಟ್ಟ ಪುಟ : Draft Mail – 5

ಚಿನ್ಮಯಿಯ mail boxನ draft folderನಲ್ಲಿ ಅವಳ ಬದುಕಿನ ಕೆಲವು ಮಹತ್ವದ ಸಂಗತಿಗಳು ದಾಖಲಿವೆ. ಮಡಚಿಟ್ಟ ಪುಟಗಳಂತೆ. ಬದುಕು ಇರುವುದು ತೆರೆದಿಟ್ಟ ಪುಸ್ತಕದಲ್ಲಿ ಅಲ್ಲ… ಈ ಹೇಳದೇ ಉಳಿದ ಮಾತುಗಳಲ್ಲಿ… ಈ ಮಾತುಗಳ ಸ್ವಗತವೇ Draft mail : ಅರೆಬರೆ ಕಾದಂಬರಿ. ಇದು ಕಾದಂಬರಿಯ ಐದನೇ ಕಂತು.

ಚಿನ್ಮಯಿ ನಿರಾಳವಾಗಿದ್ದಾಳೆ. ಬೆಳಕು ಬಾಗಿಲಿನಾಚೆ ಹೋಗುತ್ತಿದ್ದರೂ ಒಳಗಿನ ಕತ್ತಲು ಮಾಯವಾಗಿದೆ. ಅವಳ ಒಳಗಿನ ಕತ್ತಲು…

ಆಡದೆ ಉಳಿಸಿಕೊಳ್ಳುವ ಮಾತು ಹೇಗೆಲ್ಲ ಜೀವ ಹಿಂಡುತ್ತೆ!
ಡ್ರಾಫ್ಟ್ ಮೇಲ್ ಕಳಿಸುವವರೆಗೂ ಅವಳಿಗೆ ತಾನು ಹೊತ್ತುಕೊಂಡಿದ್ದ ಭಾರ ಗೊತ್ತೇ ಆಗಿರಲಿಲ್ಲ!!
ಹಾಗಂತ ಎಲ್ಲ ಮಾತುಗಳು ಹೊರೆಯಾಗೋದಿಲ್ಲ. ಕೆಲವು ಯೋಗ್ಯತೆಯಲ್ಲಿ ಅದೆಷ್ಟು ಹಗುರವಾಗಿರುತ್ತವೆ ಅಂದರೆ…
ಅವುಗಳನ್ನು ನೆನೆದು ದುಃಖ ಪಡಲಿಕ್ಕೂ ಅಸಹ್ಯ ಅನ್ನಿಸಿಬಿಡುತ್ತೆ.

ಚಿನ್ಮಯಿಗೆ ಗೊತ್ತಿದೆ.
ಕಾಲ ಮೀರಿದ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲವೆಂದು.
ಕೆಲವೊಮ್ಮೆ ಅಂಥ ಮಾತುಗಳು ವ್ಯಾಲಿಡಿಟಿ ಮುಗಿದ ಮಾತ್ರೆಗಳಂತೆ ದುಷ್ಟಪರಿಣಾಮ ಬೀರೋದೇ ಹೆಚ್ಚು!

“ಬೋಲ್ ಕೆ ಲಬ್ ಆಜಾದ್ ಹೈ ತೇರೇ ಜಬಾನ್ ಅಬ್ ತಕ್ ತೇರೀ ಹೈ…” ಅವಳಿಷ್ಟದ ಫೈಜ್ ಪದ್ಯ.
ತಾನು ಕಳಿಸದೇ ಬಿಟ್ಟ ಮೇಲ್’ಗಳನ್ನು ಓದುತ್ತ ಕುಳಿತಿದ್ದಾಳೆ. ಅವನ್ನು ಈಗಲೂ ಯಾರಿಗೂ ಕಳಿಸಲಾರಳು. ಕೆಲವಂತೂ ತನಗೇನೇ ಓದಿಕೊಳ್ಳಲು ಅಸಹ್ಯ!
ತಾನು ಹಾಗೆಲ್ಲ ಇರುವ ಅನಿವಾರ್ಯತೆ ಯಾಕಿತ್ತು? ಯಾಕೆ ಮಾತಾಡಬೇಕಿದ್ದಾಗ ಸದ್ದುಸುರಲಿಲ್ಲ?
ಆಗೆಲ್ಲ ನನ್ನ ತುಟಿಗಳ ಸ್ವಾತಂತ್ರ್ಯ ಕಸಿದಿದ್ದು ಯಾರು? ನನ್ನ ನಾಲಿಗೆ ನನ್ನದಲ್ಲವೆನ್ನುವಂತೆ ಮಾಡಿದ್ದು ಯಾರು!?
ಕೊನೆಪಕ್ಷ ಗೌತಮನ ಬಳಿಯೂ ಹೇಳಿಕೊಳ್ಳಲಿಲ್ಲ!

ಎಷ್ಟು ತೆರೆದ ಪುಸ್ತಕವಾಗಿದ್ದರೂ, ಚಿನ್ಮಯಿಯ ಬದುಕಲ್ಲಿ ಮಡಚಿಟ್ಟ ಪುಟ ಸಾಕಷ್ಟಿವೆ.

~

To: nationalpbhouse@gml.com

Subject: ವಾಸಿಮ್ ಅಕ್ರಮ್ ಅವರು ನೀಡುವ ಕಿರುಕುಳದ ಕುರಿತು

ಖಾಸಿಂ ಸಾಬ್ ಅವರಿಗೆ,
ನಮಸ್ಕಾರ

ನಾನು ಪಬ್ಲಿಶಿಂಗ್ ಹೌಸ್ ತೊರೆಯಲು ನಿರ್ಧರಿಸಿದ್ದೇನೆ. ನಾಳೆ ರಾಜೀನಾಮೆ ಪತ್ರ ನೀಡಲಿದ್ದೇನೆ.
ನಾನು ಕೆಲಸ ಬಿಡಲು ಮುಖ್ಯ ಕಾರಣವನ್ನು ನಿಮ್ಮ ಬಳಿ ತಿಳಿಸಬೇಕೆಂದು ಈ ಮೇಲ್ ಬರೆಯುತ್ತಿದ್ದೇನೆ.
ನನಗೆ ಈ ಸಂಸ್ಥೆ, ಕೆಲಸ, ಸಹೋದ್ಯೋಗಿಗಳು ಯಾವುದರಿಂದಲೂ ಸಮಸ್ಯೆ ಇಲ್ಲ. ನೀವು ಕೂಡಾ ಪ್ರೋತ್ಸಾಹ ನೀಡುತ್ತಿದ್ದೀರಿ.
ಆದರೆ, ನನಗೆ ನಮ್ಮ ವಿಭಾಗದ ಮುಖ್ಯಸ್ಥ ವಾಸಿಮ್ ಅಕ್ರಮ್ ಅವರಿಂದ ತೊಂದರೆಯಾಗುತ್ತಿದೆ. ಅವರು ನನ್ನ ವೈಯಕ್ತಿಕ ಜೀವನದಲ್ಲಿ ಅನಗತ್ಯವಾಗಿ ತಲೆ ಹಾಕುತ್ತಾ ಕಿರುಕುಳ ನೀಡುತ್ತಿದ್ದಾರೆ.
ನನ್ನ ಉಡುಗೆ ತೊಡುಗೆಗಳ ಬಗ್ಗೆ ಕಮೆಂಟ್ ಮಾಡುವುದು, ಅಸಭ್ಯವಾಗಿ ಸ್ಪರ್ಶಿಸುವುದು, ಮತ್ತು ನಾನು ಇಲ್ಲಿ ಹೇಳಲು ಸಾಧ್ಯವಾಗದ, ನನಗೆ ಅಸಹ್ಯ ಅನ್ನಿಸುವಂಥ ವರ್ತನೆ ತೋರುತ್ತಾರೆ.
ನಾನು ನೇರವಾಗಿ ಹೇಳಿದರೂ ಪ್ರಯೋಜನವಾಗಿಲ್ಲ. ನಿಮಗೆ ನೇರವಾಗಿ ದೂರು ನೀಡೋಣ ಅಂದುಕೊಂಡರೆ, ಹಿರಿಯರಾದ ನಿಮ್ಮೆದುರು ಇದನ್ನು ವಿವರಿಸಿ ಹೇಳಲು ಸಾಧ್ಯವಾಗುತ್ತಿಲ್ಲ.
ನನ್ನ ಹಾಗೆ ಮತ್ತೆ ಯಾವ ಸಿಬ್ಬಂದಿಯೂ ಮಾನಸಿಕ ಹಿಂಸೆ ಅನುಭವಿಸಬಾರದು. ಆದ್ದರಿಂದ, ದಯವಿಟ್ಟು ಅಕ್ರಮ್ ಅವರ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿ.

ವಂದೇ,
ಚಿನ್ಮಯಿ ಕೆಸ್ತೂರ್

~

2006 ಜೂನ್ 29ರಂದು ಬರೆದಿಟ್ಟ ಮೇಲ್!
ಚಿನ್ಮಯಿ ಯೋಚಿಸುತ್ತಿದ್ದಾಳೆ.
ತನ್ನ ಆಗಿನ ಪರಿಸ್ಥಿತಿಯಲ್ಲಿ, ಅಸಹಾಯಕತೆಯಲ್ಲಿ ಖಾಸಿಂ ಸಾಹೇಬರ ಎದುರು ನಿಂತು ದೂರು ಹೇಳುವುದು ಕಷ್ಟವಿತ್ತು. ಕೊನೆಪಕ್ಷ ಮೇಲ್ ಮೂಲಕವೂ ಅವರಿಗೆ ರಾಜೀನಾಮೆಯ ನಿಜ ಕಾರಣ ಹೇಳಲಾರದೆ ಹೋದಳು.

ಆದರೆ, ಗೌತಮನಿಗೇಕೆ ಹೇಳಲಿಲ್ಲ!?
ಚಿನ್ಮಯಿ ಅದಕ್ಕೆ ಕಾರಣವೇನಿತ್ತೆಂದು ನೆನೆದು ನಗಾಡುತ್ತಿದ್ದಾಳೆ. ಗೌತಮ ಕೆಲವೊಮ್ಮೆ ದೆವ್ವ ಬಡಿದ ಹಾಗೆ ಆಡುತ್ತಾನೆ!
ಅವಳೇನಾದರೂ ಅದನ್ನು ಅವನ ಬಳಿ ಹೇಳಿಕೊಂಡಿದ್ದರೆ ಖಂಡಿತಾ “ತುರ್ಕ ನನ್ನ ಮಕ್ಕಳು…” ಅಂತ ಶುರು ಮಾಡಿರುತ್ತಿದ್ದ. ಇಸ್ಲಾಂ ಹೇಗೆ ಸೆಕ್ಸ್ ಆಧಾರಿತ ಪಂಥ, ಅಲ್ಲಿ ಹೇಗೆ ಹೆಣ್ಣುಗಳನ್ನು ಕೀಳಾಗಿ ಕಾಣುತ್ತಾರೆ, ಹೇಗೆಲ್ಲ ಬಳಸಿಕೊಳ್ತಾರೆ ಅಂತ ಭಾಷಣ ಬಿಗಿಯುತ್ತಿದ್ದ!

ಚಿನ್ಮಯಿಗೆ ಚೆನ್ನಾಗಿ ಗೊತ್ತಿದೆ. ಅದು ವಾಸಿಮ್ ಅಕ್ರಮ್ ಅಲ್ಲದೆ ವಸಿಷ್ಠ ಆತ್ರೇಯನಾಗಿದ್ದರೂ ಅಂಥ ಅನುಭವ ಖಾತ್ರಿ ಇತ್ತೆಂದು. ಬೇರೆ ಸಂದರ್ಭಗಳಲ್ಲಿ ಅವಳು ಅದನ್ನು ಅನುಭವಿಸಿದ್ದಳು. ಮುಂದೆಯೂ ಸಾಕಷ್ಟು ಇಂಥಾ ಅನುಭವಗಳು ಕಾದಿದೆ ಎಂದೂ ಅವಳಿಗೆ ತಿಳಿದಿತ್ತು.
ಗಂಡಸರ ಅಸೂಕ್ಷ್ಮತೆಯನ್ನು ಒಂದು ಧರ್ಮಕ್ಕೆ ಹಚ್ಚಲು ಚಿನ್ಮಯಿ ತಯಾರಿರಲಿಲ್ಲ. ಗೌತಮ ಅದನ್ನು ಮುಂದಿಟ್ಟುಕೊಂಡು ಏನೆಲ್ಲಾ ಮಾತಾಡುತ್ತಾನೆಂದು ಅವಳಿಗೆ ಗೊತ್ತಿತ್ತು.  ಈ ಬಗೆಯ ನಡತೆಗೆ ಕಾಮವಿಕೃತಿಗಿಂತಲು ಗಂಡಸುತನದ ಅಹಮಿಕೆ ಮುಖ್ಯ ಕಾರಣ ಅನ್ನೋದು ಚಿನ್ಮಯಿಯ ನಂಬಿಕೆ. ಹೀಗಿರುವಾಗ ಅಲ್ಲಿ ಧರ್ಮಕ್ಕೇನು ಕೆಲಸ?

ಗೌತಮ ಅದನ್ನು ಒಪ್ಪುತ್ತಿರಲಿಲ್ಲ. ‘ತುರ್ಕರ ಆಕ್ರಮಣ ಕಾಲದಲ್ಲಿ…’ ಅಂತ ಇತಿಹಾಸ ಪಾಠ ಹೇಳುತ್ತಿದ್ದ. ಚಿನ್ಮಯಿಯ ಬಳಿ ದೇಶದೊಳಗಿನ ರಾಜರುಗಳ, ಜನಸಾಮಾನ್ಯರ ಕತೆಗಳೇ ಕೌಂಟರ್ ಕೊಡಲು ಸಾಕಷ್ಟಿದ್ದವು. ಆದರೆ ಈ ವಾಗ್ವಾದ ಕೊನೆಗೆ ದೌರ್ಜನ್ಯವನ್ನು ವಿರೋಧಿಸುತ್ತಿಲ್ಲ ಅನ್ನುವ ಅರ್ಥ ಕೊಡುವಂತಾದರೆ… ಇದನ್ನು ಮುಂದಿಟ್ಟು ಅದನ್ನು ಸಮರ್ಥಿಸುವಂತೆ ಭಾಸವಾದರೆ… ಎಂದೆಲ್ಲ ಗಲಿಬಿಲಿಯಾಗಿ ಮಾತು ನುಂಗುತ್ತಿದ್ದಳು. 

ತುಟಿಗಳನ್ನು ಹೊಲಿಯುವುದು ದೌರ್ಜನ್ಯ ಮಾತ್ರವಲ್ಲ, ಪ್ರೀತಿ ಕೂಡಾ. ನಾಲಿಗೆ ಕಸಿಯುವುದು ದಬ್ಬಾಳಿಕೆ ಮಾತ್ರವಲ್ಲ, ಅತಿಯಾದ ಕಾಳಜಿ ಕೂಡಾ…

~

ಇಷ್ಟಕ್ಕೂ ಅಕ್ರಮ್ ಮಾಡಿದ್ದೇನು?
“ಪಿಜಿ ಗೆ ಹೋಗಿ ಏನು ಮಾಡ್ತೀರಿ…” ಅಂದವ ದನಿ ಬದಲಿಸಿ “ಒಬ್ರೇ…?” ಅನ್ನುತ್ತಿದ್ದ.
“ಎರಡು ವರ್ಷದ ಮೇಲಾಯ್ತಲ್ವ, ಹಸ್ಬೆಂಡ್ ತೀರಿಕೊಂಡು…” ಅಂತ ಒಂದಷ್ಟು ತಿಂಗಳು ಕೇಳಿದವ, ಹತ್ತನೇ ತಿಂಗಳು ಪಾಯಿಂಟಿಗೆ ಬಂದಿದ್ದ; “ನಿಮಗೆ ಅದು ಬೇಕು ಅನ್ಸಲ್ವ?” ಅಂತ ಕೇಳಿದ್ದ.
ಅವನ ದನಿಯಲ್ಲಿದ್ದ ಅಸಹ್ಯವನ್ನು ಬಗೆದು ಕೊಚ್ಚೆಗುಂಡಿಗೆ ಎಸೆಯಬೇಕು ಅನ್ನಿಸಿಬಿಟ್ಟಿತ್ತು ಚಿನ್ಮಯಿಗೆ.
ಒಮ್ಮೆಯಂತೂ… ಆ ಸೀರೆ ನೆನಪಿದೆ. ಹಸಿರು ಪಾಲಿಸ್ಟರ್… ತೆಳ್ಳಗಿತ್ತು ಸ್ವಲ್ಪ. ಎದುರು ಬಂದು ಕೂತವನ ದೃಷ್ಟಿ ಅವಳನ್ನು ಸುಟ್ಟು ಹಾಕುತ್ತಿತ್ತು. ಎದ್ದು ಹೊರಡುವಾಗ ಸವರಿಕೊಂಡೇ ಹೋಗಿದ್ದ, ತನ್ನ ಇಂಗಿತ ಸ್ಪಷ್ಟಪಡಿಸುವಂತೆ.

ಆ ಸಂಜೆ ಪಿಜಿಗೆ ಹೋದವಳೇ ಚಿನ್ಮಯಿ ಸೀರೆಯನ್ನು ಹರಿದು ಚೂರು ಚೂರು ಮಾಡಿದ್ದಳು. ಆಕಾಶ ನೋಡುತ್ತಾ ದಪ್ಪನೆ ಕುಳಿತಿದ್ದ ಮೊಲೆಗಳನ್ನು ಕತ್ತರಿಸಿ ಹಾಕಬೇಕು ಅನ್ನಿಸಿಬಿಟ್ಟಿತ್ತು. ಅವನ ಸ್ಪರ್ಶ ನೆನೆಸಿಕೊಂಡಾಗೆಲ್ಲ ಕಂಬಳಿ ಹುಳು ಹರಿದಂತೆ ಕನಲಿದಳು.

ಇದನ್ನೆಲ್ಲ ಗೌತಮನ ಬಳಿ ಹೇಳುವುದು ಸಾಧ್ಯವಿತ್ತೆ?
ಅವನ ಬಳಿ ಸಂಕೋಚ ಅಂತಲ್ಲ… ಅದನ್ನೆಲ್ಲ ಅವರು ಬಹಳ ನಿರ್ಲಿಪ್ತ ಮತ್ತು ಮುಕ್ತವಾಗಿ ಮಾತಾಡುತ್ತಿದ್ದರು.

ಈ ಪ್ರಕರಣದಲ್ಲೂ ಅವನ ಉತ್ತರ ಏನಿರುತ್ತದೆ ಎಂದು ಚಿನ್ಮಯಿಗೆ ತಿಳಿದಿತ್ತು.
“ನೀನ್ಯಾಕೆ ಮೈ ಕಾಣೋಹಾಗೆ ತೆಳ್ಳನೆ ಸೀರೆ ಉಟ್ಕೊಂಡು ಹೋಗಿದ್ದೆ?” ಅಂತ ಶುರು ಮಾಡಿ, “ಯೋಗ್ಯತೆ ಇಲ್ಲದವರಷ್ಟೆ ಮೈತೋರಿಸುವ ಬಟ್ಟೆ ಹಾಕ್ಕೊಳ್ಳೋದು” ಅನ್ನುವವರೆಗೆ ಪಾಠ ಮಾಡುತ್ತಿದ್ದ.
ಚಿನ್ಮಯಿಗೆ ಅದನ್ನು ನೆನೆಸಿಕೊಂಡರೇ ರೇಜಿಗೆಯಾಗುತ್ತಿತ್ತು.
ಗಂಡಸಿನ ಕರ್ಮಕ್ಕೆ ಧರ್ಮವನ್ನು ಮುಂದೆ ತಂದು, ಕೊನೆಗೆ ನನ್ನ ಬಟ್ಟೆಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಾನೆ ಅಂದುಕೊಂಡು ಸುಮ್ಮನಾಗಿದ್ದಳು.

~

ಅಷ್ಟಾದರೂ ಗೌತಮನಿಗೆ ನನ್ನ ಬಗ್ಗೆ ಕಾಳಜಿ ಇರಲಿಲ್ಲ ಅಂದುಕೊಳ್ಳಬಹುದೆ?
ಅವನು ಬಟ್ಟೆಯಾಚೆಗೆ ನನ್ನ ಬಗ್ಗೆ ಆಲೋಚಿಸುತ್ತಿರಲಿಲ್ಲವೆ?
ನನ್ನ ಜೊತೆ ಒಬ್ಬ ಗಂಡಸು ಅಸಹ್ಯವಾಗಿ ನಡೆದುಕೊಂಡರೆ ಅವನಿಗೆ ಏನೂ ಅನ್ನಿಸುತ್ತಲೇ ಇರಲಿಲ್ಲವೆ?

ಚಿನ್ಮಯಿಗೆ ಈ ಪ್ರಶ್ನೆಗಳನ್ನು ಕೇಳಿಕೊಳ್ಳಲು ಬಹಳ ಇಷ್ಟ.
ಅವೆಲ್ಲದರ ಉತ್ತರ ಅವಳಿಗೆ ಗೊತ್ತಿದೆ.
ಗೌತಮ ಚಿನ್ಮಯಿಯ ನೆಮ್ಮದಿಗಾಗಿ ಏನು ಮಾಡಲಿಕ್ಕೂ ಸಿದ್ಧನಿದ್ದ. ಎಷ್ಟೆಂದರೆ, ಅವನ ಕಡೆಯ ‘ಹುಡುಗರನ್ನು’ ಅಕ್ರಮ್ ಮೇಲೆ ಬಿಟ್ಟು ‘ಬುದ್ಧಿ ಕಲಿಸಲಿಕ್ಕೆ’ ಕೂಡಾ!

ಆದರೆ ಚಿನ್ಮಯಿಗೆ ಅವನು ಬಡಿದಾಡುವುದು ಕೂಡಾ ಬೇಡವಿತ್ತು.
ಚಿನ್ಮಯಿಗೆ ಗೌತಮ ತನಗಾಗಿ ಏನೆಲ್ಲ ಮಾಡಬಲ್ಲ ಅಂತ ಊಹಿಸುವುದೇ ಒಂದು ಸುಖ.
ಅವನು ಖಂಡಿತವಾಗಿ ಮಾಡುತ್ತಾನೆ ಅಂತ ಗೊತ್ತಿರುವುದರಿಂದಲೇ ತಾನು ಏನೆಲ್ಲವನ್ನೂ ಕೇಳದೆ ಬಿಟ್ಟಿದ್ದಳು!

~

“ವೇರ್ ಆರ್ ಯು?” ಚಿನ್ಮಯಿ ಗೌತಮನಿಗೆ ವಾಟ್ಸಪ್ ಮಾಡುತ್ತಿದ್ದಾಳೆ.
ಅವಳೀಗ ನಿರಾಳ.
ತನ್ನ ಹೊಸ ಘನಕಾರ್ಯವನ್ನು ಅವನಿಗೆ ಹೇಳಬೇಕು ಅನ್ನಿಸಿದೆ.
ಎರಡೇ  ನಿಮಿಷದಲ್ಲಿ ‘ಅಟ್ಲಾಂಟ’ ಅನ್ನುವ ಉತ್ತರ.
‘ದುಷ್ಟ’ ಅಂತ ರಿಪ್ಲೆ ಕಳಿಸಿ ಸುಮ್ಮನಾಗುತ್ತಾಳೆ.
‘ಆಯುರ್ವೇದ ಉದ್ಧಾರ ಮಾಡಲಿಕ್ಕೋ ಅಥವಾ ಧನ್ವಂತರಿಯನ್ನೋ!?” ಕೇಳಬೇಕೆಂದು ಕೈ ಕಡಿಯುತ್ತದೆ. ಕಷ್ಟಪಟ್ಟು ತಡೆದುಕೊಳ್ಳುತ್ತಾಳೆ.

“ಅರೆ! ನಾನು ಮೂರನೆ ಕೆಲಸಕ್ಕೆ ಸೇರುವಾಗಲೂ ಗೌತಮ ವಿದೇಶದಲ್ಲಿದ್ದ. ಅದು ಅವನ ಮೊದಲ ವಿದೇಶ ಪ್ರಯಾಣವಾಗಿತ್ತು…”
ಚಿನ್ಮಯಿಗೆ ನೆನಪಾಗುತ್ತದೆ.

ಆಗಲೂ ಧನ್ವಂತರಿಯ ಕೆಲಸಕ್ಕೇ ಅಲ್ಲವೆ ಅವನು ಹೋಗಿದ್ದು! 

ಧನ್ವಂತರಿಯ ನೆನಪಾಗುತ್ತಲೇ ಅವಳಿಗೆ ಮೈಯುರಿ. ಶಿವಾನಿ ಕೂಡಾ ಗೌತಮ ಮತ್ತು ಚಿನ್ಮಯಿಯನ್ನು ದೂರ ಮಾಡಿರಲಿಲ್ಲ. ಆದರೆ ಧನ್ವಂತರಿ…!

ಬಟವಾಡೆಯಾಗದ ಪತ್ರ ಮತ್ತು ಗೌತಮ # 2 : Draft Mail – 4

ಚಿನ್ಮಯಿಯ mail boxನ draft folderನಲ್ಲಿ ಅವಳ ಬದುಕಿನ ಕೆಲವು ಮಹತ್ವದ ಸಂಗತಿಗಳು ದಾಖಲಿವೆ. ಮಡಚಿಟ್ಟ ಪುಟಗಳಂತೆ. ಬದುಕು ಇರುವುದು ತೆರೆದಿಟ್ಟ ಪುಸ್ತಕದಲ್ಲಿ ಅಲ್ಲ… ಈ ಹೇಳದೇ ಉಳಿದ ಮಾತುಗಳಲ್ಲಿ… ಈ ಮಾತುಗಳ ಸ್ವಗತವೇ Draft mail : ಅರೆಬರೆ ಕಾದಂಬರಿ. ಇದು ಕಾದಂಬರಿಯ ನಾಲ್ಕನೇ ಕಂತು.

To: editor@kt.com

ವಿಷಯ: ನಿಮ್ಮ ಪತ್ರಿಕೆಯ ಪಕ್ಷಪಾತ ಧೋರಣೆ ಕುರಿತು

ನಮಸ್ತೇ

ಗೋಧ್ರಾ ಹಿಂಸಾಚಾರ ಕುರಿತು ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಓದಿದೆ. ನೀವು ಗೋಧ್ರಾದಲ್ಲಿ ಹಿಂದುತ್ವವಾದಿಗಳು ನಡೆಸಿದ ವಿಧ್ವಂಸದ ಬಗ್ಗೆ ಬರೆದುದೆಲ್ಲವೂ ಸರಿಯಾಗಿದೆ. ಆದರೆ, ಅದೇ ವೇಳೆ ನೀವು ಮುಸಲ್ಮಾನರು ನಡೆಸಿದ ದುಷ್ಕøತ್ಯಗಳನ್ನು ಸಂಪೂರ್ಣ ಮರೆಮಾಚಿದ್ದೀರಿ.
ಮುಗ್ಧ ಕೌಸರಳ ಭ್ರೂಣ ಬಗೆದು ಎಂದೆಲ್ಲ ಅತಿರಂಜಿತವಾಗಿ ಬರೆದಿರುವ ಲೇಖಕರು (ಆ ಹೆಣ್ಣುಮಗಳ ಅವಸ್ಥೆಗೆ ಪ್ರಾಮಾಣಿಕ ಸಂತಾಪವಿದೆ. ಆ ಕೃತ್ಯವನ್ನು ಕಟುವಾಗಿ ಖಂಡಿಸುತ್ತೇನೆ) ಕಾಶ್ಮೀರಿ ಪಂಡಿತಾಯಿನರನ್ನು ಜೀವಂತ ಗರಗಸದಲ್ಲಿ ಕೊಯ್ದಿದ್ದು ಮರೆತೇಬಿಟ್ಟಿದ್ದಾರೆ.
ಇಷ್ಟಕ್ಕೂ ಕರಸೇವಕರನ್ನು ರೈಲಿನ ಬೋಗಿಯಲ್ಲಿ ಕೂಡಿ ಹಾಕಿ ಜೀವಂತ ಸುಡದೆ ಹೋಗಿದ್ದರೆ, ಈ ಪ್ರತೀಕಾರಕ್ಕೆ ಅವರು ಇಳಿಯುತ್ತಿದ್ದರೆ?

ದಯವಿಟ್ಟು ನಿಷ್ಪಕ್ಷಪಾತವಾದ ಲೇಖನಗಳನ್ನು ಪ್ರಕಟಿಸಲು ವಿನಂತಿ.

ವಂದೇ,
ಚಿನ್ಮಯಿ ಕೆಸ್ತೂರ್

ಗೌತಮ #2

ಗೌತಮನಿಗೆ ಮಾಡಲು ಸಾಕಷ್ಟು ಕೆಲಸವಿತ್ತು. ಆಯುರ್ವೇದ ವೈದ್ಯನಾಗಿದ್ದರೂ ಅದೊಂದು ಕೆಲಸ ಬಿಟ್ಟು ಮಿಕ್ಕೆಲ್ಲದರಲ್ಲೂ ವಿಪರೀತ ಆಸಕ್ತಿ. ಆಯುರ್ವೇದ ಹೇಗೆ ಈ ದೇಶದ ಹೆಮ್ಮೆಯ ಕೊಡುಗೆ ಅನ್ನೋದನ್ನು ಬಗೆಬಗೆಯಾಗಿ ವಿವರಿಸುತ್ತಾ, ಜಗತ್ತಿನ ಸಮಸ್ತವನ್ನೂ ಆಯುರ್ವೇದದ ಪಾದದಡಿ ತಂದು ಕೆಡವುದರಲ್ಲಿ ನಿಪುಣನಾಗಿದ್ದ.

“ಹಾಗೇ ಬಿಟ್ಟರೆ, ನೀನು ಅಲೋಪತಿಗೂ ಆಯುರ್ವೇದವೇ ಮೂಲ ಅಂತ ಪ್ರೂವ್ ಮಾಡಿಬಿಡ್ತೀಯ” ಅಂತ ರೇಗಿಸ್ತಿದ್ದಳು ಚಿನ್ಮಯಿ. ಅವನು ಅದಾಗಲೇ ಆಯುರ್ವೇದ ಕಲಿತ ಅರಬರು ಯುನಾನಿ ವೈದ್ಯಕೀಯ ಪದ್ಧತಿಯನ್ನು ರೂಪಿಸಿದರು ಎಂದು ನಂಬಿಸುವಲ್ಲಿ ಯಶಸ್ವಿಯಾಗಿದ್ದ.

ಅವನ ಈ ಆಯುರ್ವೇದದ ವ್ಯಾಮೋಹ ಚಿನ್ಮಯಿಗೊಂದು ತಲೆನೋವಾಗಿಬಿಟ್ಟಿತ್ತು. ಮಣ್ಣಿನ ಸೋಪು, ಟೂತ್ ಪೇಸ್ಟು, ಗೋಮೂತ್ರದ ಫೇಸ್ ವಾಶ್ ಎಂದೆಲ್ಲ ಪ್ರಯೋಗಗಳನ್ನು ಮಾಡಲುಹೋಗಿ ಅವಳ ಮುಖ ಜಬರೆದ್ದ ಅಂಗಳವಾಗಿಬಿಟ್ಟಿತ್ತು.
ಆಯುರ್ವೇದ ಅವನ ಪಾಲಿಗೆ ಎಲ್ಲವನ್ನೂ ಭಾರತಕ್ಕೆ ತಂದು ಜೋಡಿಸುವ ಕಾಲುವೆಯಾಗಿತ್ತು. ಅಮೆರಿಕಾ ಅರಿಷಿಣದ ವೈದ್ಯಕೀಯ ಉತ್ಪನ್ನಗಳ ಪೆಟೆಂಟ್ ಪಡೆಯಿತು ಎಂದು ಊರು ಕೇರಿ ಒಂದು ಮಾಡಿ ಭಾಷಣ ಬಿಗಿದಿದ್ದ. ಇನ್ನೇನು ನಮ್ಮ ಮನೆಯ ತಾಯಂದಿರು ಕೆನ್ನೆಗಳಿಗೆ ಅರಿಷಿಣ ತೊಡೆಯುವಂತೆಯೇ ಇಲ್ಲ ಎಂದು ಕೂಗಾಡಿದ್ದ.

ಚಿನ್ಮಯಿಗೆ ಇದೆಲ್ಲ ಒಂದು ಮೋಜಿನಂತೆ ಕಾಣುತ್ತಿತ್ತು. ಚಿತ್ರಾನ್ನಕ್ಕೂ ಅರಿಷಿಣ ಹಾಕದ ಚಿನ್ಮಯಿ, ಅರಿಷಿಣ ಮೂಲ ಭಾರತವೇನಾ ಅಂತ ಕೆಳಲುಹೋಗಿ ಸಮಾ ಬೈಸಿಕೊಂಡಿದ್ದಳು.

ಅವಳು ಚಿತ್ರಾನ್ನಕ್ಕೂ ಅರಿಷಿಣ ಹಾಕದ ವಿಷಯ ತೆಗೆದಿದ್ದು ಗೌತಮನೇ.
“ನೀವು ನಕ್ಸಲೈಟರು ಭಾರತೀಯವಾದ ಎಲ್ಲವನ್ನೂ ದ್ವೇಷಿಸ್ತೀರಿ. ನಿನಗೆ ಅರಿಷಿಣ ಕಂಡರೆ ಆಗೋದೇ ಇಲ್ಲ. ಅದಕ್ಕೇ ನೀನು ಚಿತ್ರಾನ್ನಕ್ಕೂ ಬಳಸೋದಿಲ್ಲ” ಅಂತ ಅವಳ ಮೇಲೆ ಹಾರಾಡಿದ್ದ.

ಚಿನ್ಮಯಿ ಈಗಲೂ ಅರಿಷಿಣ ಹಾಕೋದಿಲ್ಲ. ಅದಕ್ಕೆ ಕಾರಣ, ಡಬ್ಬಿ ಹುಡುಕುವ ಸೋಮಾರಿತನವಷ್ಟೆ!

ಅಂದಹಾಗೆ, ಚಿನ್ಮಯಿ ಮಾತೆತ್ತಿದರೆ ಗಂಡಸರನ್ನು ಬೈಯುತ್ತಿದ್ದಳು. ಅವಳಪ್ಪನ ಕರ್ಮಠತನ ಸಾಕಾಗಿ ಬ್ರಾಹ್ಮಣ್ಯವನ್ನೂ ಬೈಯುತ್ತಿದ್ದಳು. ಅತ್ತೆ ಮನೆಯ ಆಸ್ತಿ ರಗಳೆ ಶ್ರೀಮಂತಿಕೆಯ ಬಗ್ಗೆ ರೇಜಿಗೆ ಹುಟ್ಟಿಸಿತ್ತು. ಈ ಎಲ್ಲ ಅನುಭವಗಳು ಅವಳ ವ್ಯಕ್ತಿತ್ವವನ್ನು ರೂಪಿಸಿದ್ದವು. ಗೌತಮನ ಪ್ರಕಾರ ಗಂಡಸರನ್ನು, ಬ್ರಾಹ್ಮಣರನ್ನು, ಸಂಪ್ರದಾಯಗಳನ್ನು ಬೈಯುವವರು ನಕ್ಸಲೈಟರು! ಆದ್ದರಿಂದಲೇ ಅವನು ಚಿನ್ಮಯಿಯನ್ನು ಪದೇಪದೇ ನಕ್ಸಲೈಟ್ ಅಂತ ರೇಗಿಸ್ತಿದ್ದುದು.

ಅದೆಲ್ಲ ಏನೇ ಇದ್ದರೂ ಗೌತಮನಿಗೆ ಚಿನ್ಮಯಿಯ ಮೇಲಿದ್ದ ಮಮತೆ ದೊಡ್ಡದು. ತವರು ಹಸಿರಾಗಿದ್ದೂ ಅನಾಥಳಾಗಿದ್ದ ಚಿನ್ಮಯಿ, ಕ್ಷಣಮಾತ್ರವೂ ಅದನ್ನು ನೆನೆಯದಂತೆ ಕಾಳಜಿ ವಹಿಸಿದ್ದ. ಎಷ್ಟೆಂದರೆ, ಅವಳಿಗೆ ತಾನೊಬ್ಬ ವಿಧವೆ ಅನ್ನೋದು ಮಾತ್ರವಲ್ಲ, ತನಗೂ ಒಂದು ಕಾಲದಲ್ಲಿ ಮದುವೆಯಾಗಿತ್ತು ಅನ್ನೋದೇ ಮರೆತುಹೋಗಿತ್ತು.

ಆದರೂ ಗೌತಮನ ಕುರಿತು ಚಿನ್ಮಯಿಯ ಒಳಗೊಂದು ನಿರಾಕರಣೆ ಹುಟ್ಟಿಕೊಂಡಿತ್ತು. ಅವನು ಕೆಲವೊಮ್ಮೆ ಅವಳ ವಿಚಾರಗಳೇ ಬದಲಾಗುವಂತೆ ಪ್ರಭಾವ ಬೀರಿಬಿಡುತ್ತಿದ್ದ. ಅಂಥದೊಂದು ಪ್ರಭಾವಿ ಘಳಿಗೆಯಲ್ಲೇ ಅವಳು ಪತ್ರಿಕೆಯೊಂದರ ಸಂಪಾದಕರಿಗೆ ಗೋಧ್ರಾ ಲೇಖನ ಕುರಿತು ಪ್ರತಿಕ್ರಿಯೆ ಬರೆದಿದ್ದು.

ಚಿನ್ಮಯಿ ಎಷ್ಟೇ ಪ್ರಭಾವಿತಳಾದರೂ ಜಗ್ಗುವ ಜಾಯಮಾನದವಳಲ್ಲ. ಗೋಧ್ರಾ ಕಾಂಡದ ಹಿನ್ನೆಲೆ, ಬಾಬ್ರಿ ಮಸೀದಿ ಧ್ವಂಸದಿಂದ ಹುಟ್ಟಿಕೊಂಡ ಪರಸ್ಪರ ಪ್ರತಿಕ್ರಿಯಾತ್ಮಕ ಹಿಂಸೆಗಳೆಲ್ಲವನ್ನೂ ತನಗೆ ಸಿಕ್ಕ ಸೀಮಿತ ಅವಕಾಶದಲ್ಲೆ ಜಾಲಾಡಿದಳು.
ಹಾಗೆಂದೇ, ಗೌತಮನ ವೀರಾವೇಶದ ಪ್ರೇರಣೆಯಿಂದ ಮೇಲ್ ಬರೆದವಳು, ಅದನ್ನು ಕಳಿಸದೆ ಉಳಿದಿದ್ದಳು.

ಅವಳಲ್ಲಿ ಸಾಕಷ್ಟು ಪ್ರಶ್ನೆಗಳಿದ್ದವು. ಒಂದು ಘಟನೆ ನಡೆದಾಗ ಮತ್ತೊಂದನ್ನು ತಂದು ಅದರ ಎದುರಿಡುವುದನ್ನು ಅವಳು ಒಪ್ಪುತ್ತಿರಲಿಲ್ಲ. ಕಾಶ್ಮೀರಿ ಪಂಡಿತರ ಹೋರಾಟ ಪ್ರತ್ಯೇಕವಾಗಿ ಮಾಡಲಿ; ಅದಕ್ಕೆ ದಿನದ ಬಾಕಿ ಮುನ್ನೂರಾ ಅರವತ್ನಾಲ್ಕು ದಿನಗಳಿವೆ. ಗೋಧ್ರಾ ವಿಷಯ ಎತ್ತಿದ ದಿನವೇ ಅದರ ಚರ್ಚೆ ಯಾಕಾಗಬೇಕು ಅನ್ನೋದು ಅವಳ ಪ್ರಶ್ನೆಯಾಗಿತ್ತು.

ಗೌತಮ ಅದಕ್ಕೂ ಉತ್ತರ ಕೊಡುತ್ತಿದ್ದ. ಘಜ್ನಿ ಘೋರಿ ಇಂದ ಶುರು ಮಾಡುತ್ತಿದ್ದ. ಹೇಗೆ ಭಾರತೀಯ ಸಂಸ್ಕೃತಿ ನಾಶವಾಯಿತೆಂದು ಹೇಳುತ್ತಿದ್ದ. ಚಿನ್ಮಯಿ ಕಾಂಬೋಡಿಯಾದಿಂದ ಹಿಡಿದು ಇಂಡೋನೇಶಿಯಾವರೆಗೆ ಮೂಲ ಧರ್ಮ ಮಂಗಮಾಯವಾಗಿ ಭಾರತೀಯ – ಬೌದ್ಧೀಯತೆಗಳು ಬೇರೂರಿದ ಬಗ್ಗೆ ಹೇಳುತ್ತಿದ್ದಳು.

ಅವಳ ಪ್ರಕಾರ “ಖಡ್ಗದ ತುದಿಯಿಂದ ಹೆದರಿಸಿದರೂ, ಮಾತಲ್ಲಿ ಮರುಳು ಮಾಡಿದರೂ ಎರಡರ ಪರಿಣಾಮ ಒಂದೇ. ಮೂಲನಿವಾಸಿಗಳ ನಾಶ. ಅಲ್ಲದೆ, ಭಾರತದ ರಾಜರು ಪೂರ್ವ ದೇಶಗಳಿಗೆ ಹೋಗಿ ಎಲ್ಲೆಲ್ಲಿ ಏನು ಮಾಡಿದ್ದರೋ ಯಾರಿಗೆ ಗೊತ್ತು!?

ಚಿನ್ಮಯಿಯ  ಪ್ರಶ್ನೆಗಳು ಗೌತಮನಿಗೆ ಕಿರಿಕಿರಿ ಮಾಡುತ್ತಿದ್ದವು. ಇದರಿಂದಾಗಿ ಅವರ ನಡುವೆ ಸಾಕಷ್ಟು ಜಗಳ ನಡೆಯುತ್ತಿತ್ತು. ಆಗ ತಾನೆ ಚೂರು ಪಾರು ಬರೆಯಲು ಶುರು ಮಾಡಿದ್ದ ಚಿನ್ಮಯಿ, ಅವಕಾಶ ಕಳೆದುಕೊಳ್ಳುವ ಭಯಕ್ಕೆ ಹೀಗೆಲ್ಲ ಮಾತಾಡುತ್ತಾಳೆಂದು ಅವನು ಕೆಣಕುತ್ತಿದ್ದ.
ಅವಳು ಜಗಳ ಬೆಳೆಸುವ ಆಸಕ್ತಿ ಇಲ್ಲದೆ, “ಎಷ್ಟಾದರೂ ನಾಳೆ ನಾನು – ನೀನು  ನಾಳೆ ಗೋಪಿಕಾದಲ್ಲಿ ಒಟ್ಟಿಗೆ ಊಟ ಮಾಡಲೇಬೇಕು”ಅನ್ನುತ್ತಾ  ನಕ್ಕು ಸುಮ್ಮನಾಗುತ್ತಿದ್ದಳು.

ಪಿಜಿಯಲ್ಲಿ ಇರುತ್ತಿದ್ದ ಚಿನ್ಮಯಿಗೆ ಸಿಗುತ್ತಿದ್ದ ವಾರಾಂತ್ಯಗಳು ಗೌತಮನೊಡನೆ ಇಂಥಾ ಜಗಳ ಮತ್ತು ರಾಜಿಗಳಲ್ಲಿ ಕಳೆದುಹೋಗುತ್ತಿದ್ದವು; ಮತ್ತು, ಬಟ್ಟೆ ಒಗೆಯುವುದರಲ್ಲಿ!

ಆಮೇಲೆ ಗೌತಮ ಆಯುರ್ವೇದದಿಂದ ದೇಶಭಕ್ತಿ ಜಾಗೃತಗೊಳಿಸುವ ಪ್ರಾಜೆಕ್ಟಿನಲ್ಲಿ ಬ್ಯುಸಿಯಾಗಿಹೋದ.
ಚಿನ್ಮಯಿ ತನ್ನ ಮೊದಲ ಕೆಲಸ ಬಿಟ್ಟು ಮತ್ತೊಂದರ ಹುಡುಕಾಟಕ್ಕೆ ತೊಡಗಿದಳು.

ಸೇರಿಕೊಂಡ ವರ್ಷದೊಳಗೇ ಅವಳು ಕೆಲಸ ಬಿಡಲು ಕಾರಣವೇನೆಂದರೆ…

(ಮುಂದುವರೆಯುವುದು)

ಗೌತಮ #1 : Draft Mail – 3

ಚಿನ್ಮಯಿಯ mail boxನ draft folderನಲ್ಲಿ ಅವಳ ಬದುಕಿನ ಕೆಲವು ಮಹತ್ವದ ಸಂಗತಿಗಳು ದಾಖಲಿವೆ. ಮಡಚಿಟ್ಟ ಪುಟಗಳಂತೆ. ಬದುಕು ಇರುವುದು ತೆರೆದಿಟ್ಟ ಪುಸ್ತಕದಲ್ಲಿ ಅಲ್ಲ… ಈ ಹೇಳದೇ ಉಳಿದ ಮಾತುಗಳಲ್ಲಿ… ಈ ಮಾತುಗಳ ಸ್ವಗತವೇ Draft mail : ಅರೆಬರೆ ಕಾದಂಬರಿ. ಇದು ಕಾದಂಬರಿಯ ಮೂರನೇ ಕಂತು.

ಚಿನ್ಮಯಿ ಆ ಮೇಲ್ ಕಳಿಸಲೂ ಇಲ್ಲ, ಸಾಯಲೂ ಇಲ್ಲ. (ಯಾವ mail…? ಇಲ್ಲಿ ನೋಡಿ: http://chetanachaitanya.mlblogs.com/2018/11/01/draft2/)

ಆ ಮೊದಲ ಡ್ರಾಫ್ಟ್‍ನಿಂದ ಈವರೆಗಿನ ಕೊನೆಯ ಡ್ರಾಫ್ಟ್’ವರೆಗೆ ಹತ್ತು ವರ್ಷಗಳು ಕಳೆದಿವೆ.
ಅದಕ್ಕೂ ಹಿಂದಿನದೆಲ್ಲ ಸೇರಿ, ಈ ಹದಿನೈದು ವರ್ಷಗಳ ಹರಿವಿನಲ್ಲಿ ಅವಳು ಈಜಿದ್ದೆಷ್ಟು, ಮುಳುಗಿದ್ದೆಷ್ಟು!

ಆಗಾಗ ಮನೆಗೆ ಬರುವ ತವರು ಅವಳ ತಲೆ ನೇವರಿಸಿ ಕಣ್ಣೀರಿಡುತ್ತದೆ. ಚಿನ್ಮಯಿಗೆ ಯಾಕೆಂದೇ ಅರ್ಥವಾಗೋದಿಲ್ಲ.

ಮಧ್ಯಾಹ್ನದಲ್ಲಿ ಬೆಳಕಿನ ಬಾಗಿಲಾಗುವ ಬಿಸಿಲು, ಹೊತ್ತು ಕಳೆದಂತೆ ಕರಗುವುದು ಅವಳಿಗೆ ಗೊತ್ತಿದೆ; ಮತ್ತೆ ಮರುದಿನ ಮೂಡುತ್ತದೆ ಅನ್ನೋದು ಕೂಡಾ.

ಒಂದೇ ಒಂದು ಜನ್ಮದಲ್ಲಿ ಹಲವು ಬದುಕು ಬಾಳುವ ಅವಕಾಶ ಎಲ್ಲರಿಗೂ ಸಿಗೋದಿಲ್ಲ.
ವಾಸ್ತವದಲ್ಲಿ, ಅದು ಸಿಗುವಂಥದಲ್ಲ… ನಾವೇ ಕಂಡುಕೊಳ್ಳುವಂಥದ್ದು. ಹಲವು ಬದುಕುಗಳ ಅವಕಾಶ ನಾವೇ ಸೃಷ್ಟಿ ಮಾಡಿಕೊಳ್ಳಬೇಕು. ಹಾಗಂತ ಚಿನ್ಮಯಿ ನಂಬಿಕೊಂಡಿದ್ದಾಳೆ. ಅದನ್ನು ಸಾವಧಾನವಾಗಿ ಸಾಕಾರ ಮಾಡಿಕೊಂಡಿದ್ದಾಳೆ ಕೂಡ.

ತಾನು ಏನಾಗಿದ್ದಾಳೋ ಆ ಬಗ್ಗೆ ಅವಳಿಗೆ ಖುಷಿ ಇದೆ. ಹಾಗಂತ ಅವಳು ಏನೋ ಆಗಿಬಿಟ್ಟಿದ್ದಾಳೆ ಎಂದಲ್ಲ. ಅವಳಿಗೆ ತಾನು ‘ಚಿನ್ಮಯಿ’ ಆಗಿರುವ ಬಗ್ಗೆ ನೆಮ್ಮದಿಯಿದೆ! ಹಾಗೆಂದೇ ಮನಮಂದಿಯ ದುಃಖ ಅವಳನ್ನು ಗಲಿಬಿಲಿಗೊಳಿಸುತ್ತದೆ. ಕೆಲವೊಮ್ಮೆ ರೇಜಿಗೆ ಹುಟ್ಟಿಸುತ್ತೆ ಕೂಡಾ.
~

ಚಿನ್ಮಯಿಗೆ ಹಲವು ‘ಹಿಂದಿನ ಬದುಕು’ಗಳಿವೆ. ಅಂಥವುಗಳಲ್ಲಿ ಮೊದಲನೆಯದ್ದು ‘ಮದುವೆ’.
ಹದಿಹರೆಯ ಕಳೆದ ಕೂಡಲೇ ಅವಳ ಮದುವೆಯಾಯಿತು. ಮದುವೆಯಾದ ತಿಂಗಳಿಗೆ ಗಂಡ ತೀರಿಕೊಂಡ. ಆಸ್ತಿ ಗಲಾಟೆ, ಕೊಲೆ ಎಂದೆಲ್ಲ ಪುಕಾರು.

ವಿಧವೆಯಾಗಿ ಅಮ್ಮನ ಮಡಿಲು ಸೇರಿದರೆ, ದಿನಾ ಬೆಳಗು ಕರ್ಮಠ ತಂದೆಯ ಚುಚ್ಚು ಮಾತು. ಪೂಜೆ ಹೊತ್ತಿಗೆ ಎದುರು ಬಂದರೆ ಮನೆಯಲ್ಲಿ ಮಹಾಭಾರತ!

ಬೇಸತ್ತು, ಸಂಜೆ ಕಳೆಯಲು ಮಗ್ಗಲು ರಸ್ತೆಯ ಸಮಿತಿಗೆ ಹೋಗುವ ರೂಢಿ ಮಾಡಿಕೊಂಡಳು ಚಿನ್ಮಯಿ. ಹೊತ್ತು ಹೋಗಬೇಕಲ್ಲ? ಅವಳದ್ದು ಸುಮ್ಮನೆ ಕೂರುವ ಜಾಯಮಾನವಲ್ಲ.

ಸಮಿತಿಯಲ್ಲಿ ಗೀತಕ್ಕ ಮೊದಲು ಓದಲು ಕೊಟ್ಟ ಪುಸ್ತಕ ಸೂರ್ಯನಾಥ ಕಾಮತರ ‘ಥೇಮ್ಸ್‍ನಿಂದ ಗಂಗೆಗೆ. ಪುಸ್ತಕ ಕೈಲಿ ಹಿಡಿದಾಗ ಅವಳಿಗೆ ಅದನ್ನೇ ಯಾಕೆ ಕೊಟ್ಟರೆಂದು ಅರ್ಥವಾಗಿರಲಿಲ್ಲ. ಓದುತ್ತ ಇರುವಾಗ ಅರ್ಥವಾಯಿತೆಂದೂ ಅಲ್ಲ.
ಆದರೆ, ಈ ಓದಿನಲ್ಲೇನೋ ರಾಜಕಾರಣವಿದೆ ಅನ್ನಿಸಿದ್ದಂತೂ ಹೌದು.

ಅವಳಿಗೆ, ಗೀತಕ್ಕ ‘ಥೇಮ್ಸ್ ನಿಂದ ಗಂಗೆಗೆ’ ಪುಸ್ತಕವನ್ನೇ ಮೊದಲ ಓದಿಗೆ ಕೊಟ್ಟಿದ್ಯಾಕೆ ಅನ್ನೋದು ಖಚಿತವಾಗಿ ಅರ್ಥವಾಗಲು ಎರಡು – ಮೂರು ವರ್ಷಗಳೇ ಬೇಕಾದವು! ಕಾಲೇಜು ದಿನಗಳಲ್ಲಿ ‘ವೋಲ್ಗಾ – ಗಂಗಾ’ ಓದಿದ್ದ ಚಿನ್ಮಯಿ, ಈ ಪುಸ್ತಕವನ್ನು ಉಸಿರು ಕಟ್ಟಿಕೊಂಡೇ ಓದಿ ಮುಗಿಸಿದ್ದಳು.
ಗೀತಕ್ಕ, “ನಿನ್ನ ಇಷ್ಟದ ಪುಸ್ತಕಗಳು ಯಾವುದೆಲ್ಲ?” ಅಂತ ಕೇಳಿದಾಗ ಅವಳು ಕೊಟ್ಟಿದ್ದ ಪಟ್ಟಿ ಸಮಿತಿಯವರನ್ನು ಗಾಬರಿ ಬೀಳಿಸಿತ್ತು.  ಆದರೆ ಅವೆಲ್ಲ ಅವಳ ಗಮನಕ್ಕೆ ಬಂದಿದ್ದು ನಂತರದ ದಿನಗಳಲ್ಲಿ. 

ಈ ನಡುವೆ ಚಿನ್ಮಯಿಗೆ ಎಜುಕೇಶನ್ ಮುಂದುವರಿಸಬೇಕು ಅನ್ನುವ ಆಸೆಯಿತ್ತು. ಆದರೆ, ಅವಳಪ್ಪ ಕಾಲೇಜಿಗೆ ಕಳಿಸಲು ತಯಾರಿರಲಿಲ್ಲ. ಹೋಗಲಿ ಕೆಲಸ ಮಾಡುತ್ತೀನಿ ಅಂದರೂ ಬಿಡಲಿಲ್ಲ.
ಚಿನ್ಮಯಿಗೆ ಹೊತ್ತು ಕಳೆಯಲು ಸಮಿತಿಯ ಹೊರತಾಗಿ ಬೇರೆ ದಾರಿಯೇ ಉಳಿಯಲಿಲ್ಲ.
ಮಗಳು ಅಲ್ಲಿಗೆ ಹೋಗೋದು ಅಪ್ಪನಿಗೂ ಒಂದು ಥರದ ಸಮಾಧಾನ!

ಈ ದಿನಗಳಲ್ಲೇ ಅವಳಿಗೆ ಗೌತಮನ ಪರಿಚಯವಾಗಿದ್ದು.
ಸಮಿತಿಯಲ್ಲಿ ಚಿನ್ಮಯಿ ಕೇಳುತ್ತಿದ್ದ ‘ಅಧಿಕಪ್ರಸಂಗ’ದ ಪ್ರಶ್ನೆಗಳಿಗೆ ಉತ್ತರಿಸಲೆಂದೇ ವಿಶೇಷವಾಗಿ ಗೀತಕ್ಕ ಅವನನ್ನು ಕರೆಸಿದ್ದರು.
ಗೌತಮನಿಗೆ ಚಿನ್ಮಯಿಯ ಪ್ರಶ್ನೆಗಳು ಇಷ್ಟವಾಗುತ್ತಿದ್ದವು. ಅವನ್ನು ತನ್ನ ಕಲಿಕೆಗೆ ಸವಾಲಿನಷ್ಟೆ ಪುಷ್ಟಿ ಎಂದೂ ಅವನು ಭಾವಿಸುತ್ತಿದ್ದ.
ಚರ್ಚೆ ಅಂದುಕೊಂಡು ಜಗಳವಾಡುತ್ತಲೇ ಅವರ ನಡುವೆ ಒಂದು ವಿಚಿತ್ರ ಆಪ್ತತೆ ಹುಟ್ಟಿಕೊಂಡಿತು.
ಹೆಣ್ಣುಮಕ್ಕಳ ಬಗ್ಗೆ ಅಷ್ಟೇನೂ ಮೃದು ಧೋರಣೆ ಇಲ್ಲದೆ ಹೋದರೂ ಗೌತಮನಿಗೆ ಅವಳ ಕತೆ ಕೇಳಿ ಸಂಕಟವಾಗಿತ್ತು.

ಸಮಿತಿಯ ಸಹವಾಸದಲ್ಲಿ ಚಿನ್ಮಯಿ, ತನಗಿನ್ನು ಬೇರೆ ಬದುಕಿಲ್ಲ ಅಂದುಕೊಂಡು ಸೇವಾವ್ರತಿ ತರಬೇತಿ ಪಡೆಯುವ ನಿರ್ಧಾರ ಮಾಡಿದಳು.
ಅವಳಪ್ಪ, ಮಗಳು ಮನೆ ಸೇರಿದ ಎಂಟು ತಿಂಗಳ ನಂತರ ಅದೇ ಮೊದಲ ಸಲ ಕೈಯೆತ್ತಿ ಒಂದಷ್ಟು ದುಡ್ಡು ಕೊಟ್ಟರು.
ಅದು, ತರಬೇತಿ ಶಿಬಿರಕ್ಕೆ ಕೆಂಪಂಚಿನ ಬಿಳಿ ಸೀರೆ ಕೊಳ್ಳಲು ಕೊಟ್ಟ ಹಣವಾಗಿತ್ತು!

ಗೌತಮ ಚಿನ್ಮಯಿಯೊಳಗೆ ಬೇರೊಂದು ಕಿಡಿ ಕಂಡಿದ್ದ.
ಸಮಿತಿಯ ವಿಚಾರಗಳಿಗೂ ಅವಳ ಆಲೋಚನೆಗೂ ಸಂಬಂಧವೇ ಇಲ್ಲವೆಂದು ಅವನಿಗೆ ಸ್ಪಷ್ಟವಿತ್ತು.
ಅವಳ ನಿರ್ಧಾರ ಅವಳನ್ನು ಖುಷಿಯಾಗಿಡುವುದಿಲ್ಲ ಎಂದು ತಿಳಿದಿತ್ತು.
ಅಷ್ಟು ಮಾತ್ರವಲ್ಲ, ಮುಂದೆ ಅವಳು ಸಮಿತಿಗೆ ಖುಷಿ ಕೊಡುವ ಕೆಲಸ ಮಾಡುವವಳಲ್ಲ ಅಂತಲೂ ಖಾತ್ರಿಯಿತ್ತು!
ಇನ್ನೂ ಹೇಳಬೇಕೆಂದರೆ, ಅಷ್ಟು ಪುಸ್ತಕ ಓದಿಸಿ, ಶಿಬಿರಗಳಿಗೆ ಕಳಿಸಿ, ತಲೆ ತೊಳೆದರೂ ಚಿನ್ಮಯಿ ಆಡುತ್ತಿದ್ದ ಮಾತುಗಳು ಅವನಲ್ಲಿ ಅನುಮಾನ ಹುಟ್ಟಿಸಿದ್ದವು.

ಹಾಗಂತ ಅವಳ ಬಗೆಗೆ ಅವನಲ್ಲೊಂದು ಕರುಣೆ ಇದೆ.  ಅವಳ ಪಾಲಿಗೆ ಅವನೊಂದು ಅಕ್ಕರೆಯ ಕಡಲು. ಅವನೂ ಅವಳನ್ನು ಹಾಗೆಲ್ಲ ಬಿಟ್ಟುಬಿಡಲಾರ. ಅವಳೊಡನೆ ಆಪ್ತತೆ ಉಳಿಸಿಕೊಂಡೇ, ಸಮಿತಿಯಿಂದ ಅವಳನ್ನು ದೂರವಿಡಬೇಕು ಅಂದುಕೊಂಡ ಗೌತಮ.
ಅವನ ಈ ಆಲೋಚನೆ ಚಿನ್ಮಯಿಗೆ ದೊಡ್ಡ ವರದಾನವಾಯಿತು. ಅವಳ ಮತ್ತೊಂದು ಬದುಕಿಗೆ ಮುನ್ನುಡಿಯಾಯಿತು ಕೂಡಾ.
~
ಒಂದು ಬೆಳಗ್ಗೆ ಗೌತಮ ಸೀದಾ ಚಿನ್ಮಯಿಯ ಮನೆಗೆ ಬಂದವನೇ, “ನಿನಗೊಂದು ಕೆಲಸ ನೋಡಿದ್ದೇನೆ” ಅಂದ.
ಅದೊಂದು ದೊಡ್ಡ ಪಬ್ಲಿಶಿಂಗ್ ಹೌಸ್. ಬರೆಯೋದು, ಪ್ರೂಫ್ ತಿದ್ದೋದು.. ಚಿನ್ಮಯಿಗೆ ಎರಡೂ ಸರಾಗ. ಸಂಬಳವೂ ಅವಳ ಖರ್ಚೆಲ್ಲ ಕಳೆದು ಮಿಗುವಷ್ಟು!

ಆದರೆ ಅವಳ ಕರ್ಮಠ ತಂದೆ ಮುಖ ತಿರುಗಿಸಿದರು. ಊರಿನ ಮತ್ತೊಂದು ತುದಿಯಲ್ಲಿದ್ದ ಆಫೀಸಿಗೆ ದಿನಾ ಓಡಾಡುವುದು ಕಷ್ಟ..
ಚಿಕ್ಕ ಮನೆ ಮಾಡಬೇಕು ಅನ್ನುವ ನಿರ್ಧಾರವಂತೂ ಅವರನ್ನು ಕೆಂಡದಂತೆ ಕೆರಳಿಸಿತು.
ತಮ್ಮ ಮನೆತನದ ಪ್ರವರ ಹಾಡಿಹೊಗಳಿಕೊಳ್ಳುತ್ತಾ ‘ಮಂಗಳವಾರದ ಮುಂಡೆ’ ಎಂದು ಮಗಳನ್ನು ಬೈದರು.

ಅವರ ಒಂದೊಂದು ಬೈಗುಳವೂ ಚಿನ್ಮಯಿಯ ನಿರ್ಧಾರ ಗಟ್ಟಿಗೊಳಿಸುತ್ತಿತ್ತು.
ಅವರ ವೀರಾವೇಶ ಸಾಗಿರುವಾಗಲೇ ಪೆಟ್ಟಿಗೆ ತಂದು ವರಾಂಡದಲ್ಲಿ ಇಟ್ಟಳು.

ಅವಳಪ್ಪ ಮಾತು ನಿಲ್ಲಿಸಿ, ಜನಿವಾರ ಉಲ್ಟಾ ಹಾಕಿಕೊಂಡು, “ನನ್ನ ಪಾಲಿಗೆ ನೀನು ಸತ್ತೆ”ಅಂದರು.

ಡ್ರಾಫ್ಟ್ ಸೇರಿದ ಮೊದಲ ಪತ್ರ : Draft Mail – 2

ಚಿನ್ಮಯಿ ತನ್ನ ಮೇಲ್’ನಲ್ಲಿ ಡ್ರಾಫ್ಟ್’ಗಳನ್ನು ತೆರೆದುಕೊಂಡು ಕೂತಿದ್ದಳು. ಅದರಲ್ಲಿದ್ದ ಹತ್ತಾರು ಮೇಲ್’ಗಳಲ್ಲಿ ಒಂದನ್ನು ಇವತ್ತು ಕಳಿಸೇಬಿಡಬೇಕೆಂದು ನಿರ್ಧರಿಸಿ, ಕಳಿಸಿಯೂ ಬಿಟ್ಟಳು. ಆ ಮೇಲ್ ಯಾವುದೆಂದು ಮತ್ತೆ ನೋಡಣ. …

ಇಷ್ಟಕ್ಕೂ ಚಿನ್ಮಯಿ ಮೇಲ್ ಐಡಿ ಕ್ರಿಯೇಟ್ ಮಾಡಿದ ನಂತರ ಡ್ರಾಫ್ಟಿನಲ್ಲಿ ಹಾಕಿಟ್ಟ ಮೊದಲ ಮೇಲ್ ಯಾವುದು ಗೊತ್ತಾ? 

To: gautam108@gml.com

ಡಿಯರ್ ಫೆಲೋಟ್ರಾವೆಲರ್,
ನನ್ನ ತಿರುವಿನಲ್ಲಿ ತಿರುಗುತ್ತಿದ್ದೇನೆ. ಈ ತಿರುವೇ ನನ್ನ ನಿಲ್ದಾಣವೂ ಆಗಲಿದೆ.
ನಂಗೆ ಸತ್ತುಹೋಗಬೇಕು ಅನಿಸುತ್ತಿದೆ. ಇದನ್ನು ನನ್ನ ಕೊನೆಯ ಪತ್ರ ಅಂದುಕೋ.
ನೀನು ವಾಪಸ್ ಬರುವ ಹೊತ್ತಿಗೆ ನಾನು ಇರೋದಿಲ್ಲ. ಶೋಕೇಸಿನಲ್ಲಿ ನಿನ್ನ ಫೋಟೋ ಹಿಂದೆ ಡೆತ್ ನೋಟ್ ಬರೆದಿಟ್ಟಿದ್ದೀನಿ. ಅದನ್ನು ಪೊಲೀಸರಿಗೆ ಕೊಡು.
ಅದರಲ್ಲೂ ವಿಶೇಷವೇನಿಲ್ಲ. ಯಾಕೆ ಬದುಕಬೇಕು ಅಂತ ಗೊತ್ತಿಲ್ಲದ ಕಾರಣ ಸತ್ತು ಹೋಗ್ತಿದ್ದೀನಿ ಅಂತ ಬರೆದಿದ್ದೀನಿ.
ಇತ್ತೀಚೆಗೆ ನಮ್ಮ ನಡುವೆ ಜಗಳ ಜಾಸ್ತಿಯಾಗ್ತಿದೆ. ನೀನು ಇಷ್ಟು ಅಸಹನೆ ಮಾಡಿದರೆ ನಾನು ಹೇಗೆ ಬದುಕಿರಲಿ? ಖುಷಿಗೆ, ಬದುಕಿಗೆ, ಧೈರ್ಯಕ್ಕೆ ಜೊತೆ ಯಾರಿದ್ದಾರೆ?
ಆದರೆ ಡೆತ್ ನೋಟಿನಲ್ಲಿ ಇದನ್ನೆಲ್ಲ ಬರೆದಿಲ್ಲ.

ನಂಗೂ ಮೂವತ್ತಾಗುತ್ತ ಬಂತು. ಬೆಳಗಾದರೆ ಮುದುಕಿಯಾಗ್ತೀನಿ. ನೀನೂ ಮುನಿಸಿಕೊಂಡು ರಗಳೆ ಮಾಡ್ತಿದ್ದರೆ ನನಗೆ ಯಾರು ದಿಕ್ಕು?
ಆಗ ಸಾಯಲಿಕ್ಕೂ ಧೈರ್ಯ ಬರದೆ ಹೋಗಬಹುದು.. ಅದಕ್ಕೇ, ಈಗಲೇ ಧೈರ್ಯ ಇರುವಾಗ ಹೊರಟುಬಿಡುತ್ತೇನೆ.
ನೈಲ್ ಕಟರ್ ಕಂಪ್ಯೂಟರ್ ಟೇಬಲಿನ ಮೇಲಿದೆ. ಒಂದು ಸೆಟ್ ಬಟ್ಟೆ ಐರನ್ ಮಾಡಿಸಿಟ್ಟಿದ್ದೀನಿ. ಶಿವಾನಿ ಬಾಣಂತನ ಮುಗಿಸಿ ಬರುವವರೆಗೆ ಸಾಕಗ್ತವೆ. 

ನಿನ್ನ ಬುಕ್‍ಗಳನ್ನು ಆರ್ಡರಿನಲ್ಲಿ ಜೋಡಿಸಿಟ್ಟಿದೀನಿ.
ನೀನು ಯಾವಾಗಲೂ ಗಲಾಟೆ ಮಾಡುತ್ತಿದ್ದಂತೆ; ಕಮ್ಯುನಿಸ್ಟರದ್ದು ಒಂದು ಕಡೆ, ರಾಷ್ಟ್ರೀಯ ವಿಚಾರಧಾರೆ ಒಂದು ಕಡೆ… ಗೌತಮ ಅಂತ ಸ್ಟಿಕ್ಕರ್ ಹಚ್ಚಿರೋದು ಮಾತ್ರ ನಿನ್ನವು, ನನ್ನ ಬುಕ್ಕುಗಳ ತಂಟೆಗೆ ಹೋಗಬೇಡ. ನಿನ್ನ ಮನೆಗೆ ವಾಪಸ್ ಶಿಫ್ಟ್ ಆಗುವಾಗ ನಿನ್ನದೆಲ್ಲವನ್ನೂ ಮರೆಯದೆ ತಗೊಂಡು ಹೋಗು. 

ಕೊನೆಯದಾಗಿ ಒಂದು ಮಾತು. ಮೊನ್ನೆ ನಾನು ಶೇರ್ ಮಾಡಿದ್ದ ಲೇಖನದಲ್ಲಿ ನೀನು ಬೈಯುವಂಥದೇನೂ ಇರಲಿಲ್ಲ. ಅದರ ಶೀರ್ಷಿಕೆ ಓದಿಯೇ ನೀನು ಉರಿದುಬಿದ್ದಿದ್ದು ಯಾಕೆ!? ಮೂರು ದಿನಗಳಾದವಲ್ಲ, ನೀನು ನನ್ನನ್ನು ಮಾತಾಡಿಸದೆ!? ನಾನು ಯಾರದೋ ಗೆಳೆತನಕ್ಕೆ ಕಟ್ಟುಬಿದ್ದು ಅಭಿಪ್ರಾಯ ರೂಪಿಸಿಕೊಳ್ಳೋಹಾಗಿದ್ದರೆ…. ಜೀವ ನೀನು…. ನಿನ್ನ ಮುಲಾಜಿಗೆ ನೀನು ಹೇಳಿದ್ದಕ್ಕೆಲ್ಲ ಹೂಂಗುಟ್ಟಬಹುದಿತ್ತಲ್ವ? ಅದೇ ಸಾಧ್ಯವಿಲ್ಲ ಅಂದಮೇಲೆ ಇನ್ಯಾರದೋ ಹೌದುಗಳಲ್ಲಿ ಹೌದಾಗಲು ನನಗೇನು ದರ್ದು ಮಹರಾಯಾ!

ಆ ಲೇಖನವನ್ನು ಮತ್ತೊಮ್ಮೆ ಸಮಾಧಾನವಾಗಿ ಓದಿ ನೋಡು. ಹೆಸರು ನೋಡಿ ಉರಿದು ಬೀಳುವುದು ಕಡಿಮೆ ಮಾಡು. ಪೂರ್ವಗ್ರಹದಿಂದ ಹೊರಗೆ ಬರದೆಹೋದರೆ, ನೀನು ಅಚ್ಚಿನೊಳಗೆ ಎರಕವುಂಡು ಹೊಮ್ಮುವ ಮತ್ತೊಂದು ಗೊಂಬೆಯಾಗಿಬಿಡ್ತೀಯ… ಅಷ್ಟೆ. 

ನಿನ್ನಲ್ಲಿ ಶಕ್ತಿ ಮತ್ತು ಉತ್ಸಾಹ ಜಿಗಿದಾಡ್ತಿದೆ… ನೀನು ಬೆಳೆಯುವ ಎತ್ತರ ಊಹಿಸಬಲ್ಲೆ. 
ಆದರೆ, ಮಹರಾಯಾ.. ನಿನಗೆ ಕಬೀರರ ದೋಹೆ ನೆನಪಿಲ್ಲವಾ? ಪುರುಷೋತ್ತಮಾನಂದ ಜಿ ಕ್ಯಾಸೆಟ್ಟಿನಲ್ಲಿ ಎಷ್ಟು ಚೆಂದ ಹಾಡಿದ್ದಾರೆ.. “ಎತ್ತರ ಬೆಳೆದರೆ ಏನು ಬಂತು, ಖರ್ಜೂರದ ಮರದಂತೆ.. ದಾರಿಹೋಕನಿಗೆ ನೆರಳಿಲ್ಲ, ಹಣ್ಣೂ ಬಲು ದೂರ!”
ನೀನು ಹಾಗೆ ಖರ್ಜೂರದ ಮರ ಆಗಿಬಿಡ್ತೀಯೇನೋ ಅನ್ನುವ ಭಯ ನನಗೆ. 

ಇರಲಿ ಬಿಡು… ನನಗೇನು? ನಾನಂತೂ ಸತ್ತುಹೋಗುವವಳು. ನಿನ್ನ ಜೊತೆ ರಾಷ್ಟ್ರ ಧರ್ಮ ಸಂಸ್ಕೃತಿ ಅಂತ ದಿನಾದಿನಾ ಹೊಡೆದಾಡಿ  ಸಾಯೋದಕ್ಕಿಂತ ಒಟ್ಟು ಸಾಯೋದು ಒಳ್ಳೇದು!

ಅವೆಲ್ಲ ಇರಲಿ. ನಾನು ಸತ್ತುಹೋದ ಮೇಲೆ ಅಳಬೇಡ. ನಿನ್ನದು ಕಲ್ಲು ಹೃದಯವೇನಲ್ಲ, ಗೊತ್ತಿದೆ. ಶಿವಾನಿಗೆ ನಾನು ಇಷ್ಟವಿಲ್ಲ. ಇದ್ದಿದ್ದರೆ, ನಿನ್ನ ಮಗಳಾಗಿ ಹುಟ್ಟಿಬರ್ತಿದ್ದೆ. ಹಾಗಂತ ನಿನಗೆ ಹೆಣ್ಣು ಹುಟ್ಟಿದರೆ, ನನ್ನ ಹೆಸರು ಇಡಲೇನೂ ಹೋಗಬೇಡ. ನನಗೋಸ್ಕರ ನೀವಿಬ್ಬರು ಕಿತ್ತಾಡಿಕೊಳ್ಳೋದು ನನಗಿಷ್ಟವಿಲ್ಲ. 

ಸಾವಿನ ರೊಟ್ಟಿ ತಟ್ಟೆಯಲ್ಲಿಟ್ಟುಕೊಂಡಿದ್ದೀನಿ. ಈಗ ತಿನ್ನಬೇಕು. 

ಬೈ
ನಿನಗೇನೂ ಅಲ್ಲದ,
ಚಿನ್ಮಯಿ

Draft Mail : ಅರೆ ಬರೆ ಕಾದಂಬರಿ

ಚಿನ್ಮಯಿ ಕಾಲು ನೀಡಿಕೊಂಡು, ಲ್ಯಾಪ್‍ಟಾಪ್ ತೆರೆದು ಕುಳಿತಿದ್ದಾಳೆ. ನಡು ಮಧ್ಯಾಹ್ನದ ಬಿಸಿಲು ಗೋಡೆಗೆ ಅಪ್ಪಳಿಸಿ, ಬಾಗಿಲುದ್ದ ನೆಲದ ಮೇಲೆ ಅಂಗಾತ ಬಿದ್ದಿದೆ.
“ಅರೆ! ಬೆಳಕಿನ ಬಾಗಿಲು..” ತನ್ನೊಳಗೆ ಬೆರಗಾಗುತ್ತಾಳೆ.
ಹಗೂರ ಎದ್ದು, ಹೊಸ್ತಿಲಾಚೆ ಬಿಸಿಲಿಗೆ ಬೆನ್ನಾಗಿ ನಿಲ್ಲುತ್ತಾಳೆ. ಮನೆಯೊಳಗೆ ನೆಲದಲ್ಲಿ ಅವಳ ನೆರಳು!

ಮೊಬೈಲ್ ಕ್ಯಾಮೆರಾ ಆನ್ ಮಾಡಿ, ಸೆಲ್ಫಿ ಮೋಡಿನಿಂದ ಮಾಮೂಲಿಗೆ ಬರುತ್ತಾಳೆ.
ಯಾವ ಕೋನದಿಂದ ತೆಗೆದರೆ ಫೋಟೋ ಚೆನ್ನಾಗಿ ಬರುತ್ತದೆ ಅನ್ನೋದು ಅವಳಿಗೆ ಗೊತ್ತಿದೆ.
ತಮ್ಮದೇ ಫೋಟೋ ತೆಗೆದುಕೊಳ್ಳುವವರು ಛಾಯಾಗ್ರಹಣವನ್ನ ವಿಶೇಷವಾಗಿ ಅಭ್ಯಾಸ ಮಾಡಬೇಕಿಲ್ಲ.. ನಾರ್ಸಿಸಿಸ್ಟ್‍ಗಳಾದರೆ ಸಾಕು ಅನ್ನೋದು ಅವಳ ನಂಬಿಕೆ.

ಚಿನ್ಮಯಿ ತೆಗೆದ ಫೋಟೋ ಅದ್ಭುತವಾಗಿ ಬಂದೇಬಂದಿದೆ. ‘ದೇಹ ಮೀರಿದರೂ ನೆರಳಿಗೆ ಹೊಸ್ತಿಲು ದಾಟಲಾರದ ಭಯ’ ಅನ್ನುವ ಒಕ್ಕಣೆ ಕೊಟ್ಟು ಇನ್ಸ್ಟಾಗ್ರಾಮಿನಲ್ಲಿ ಶೇರ್ ಮಾಡುತ್ತಾಳೆ.

ಅವಳು ತೀರ ಪುರುಸೊತ್ತಿನಲ್ಲಿ ಇದ್ದಾಳೆಂದು ಇದನ್ನೆಲ್ಲ ಮಾಡುತ್ತಿಲ್ಲ. ಮಾಡಲೇಬೇಕಿರುವ ಕೆಲಸವೊಂದನ್ನು ಎಷ್ಟು ಸಾಧ್ಯವೋ ಅಷ್ಟು ಹೊತ್ತು ಮುಂದೂಡಲಿಕ್ಕಾಗಿ ಮಾಡುತ್ತಿದ್ದಾಳೆ. ಅದೊಂದು ಮಾಡಿಬಿಟ್ಟರೆ ಈ ದಿನದ ಕೆಲಸವೇ ಮುಗಿದುಹೋಗುತ್ತದೆ. ಆದರೆ ಚಿನ್ಮಯಿ ಯಾವುದನ್ನು ವಿಪರೀತ ಇಷ್ಟಪಡುತ್ತಾಳೋ ಅದನ್ನು ಹೊಂದಲು ಭಯಪಡುತ್ತಾಳೆ.

ಅವಳಿಗೆ ಖಾಲಿಯಾಗುವುದೆಂದರೆ ಇಷ್ಟ.
ಅವಳಿಗೆ ಖಾಲಿಯಾಗುವುದೆಂದರೆ ಭಯ. 

ಇವತ್ತು ಚಿನ್ಮಯಿ ಏನಾದರಾಗಲಿ, ಮೇಲ್ ಕಳಿಸಿಯೇಬಿಡಬೇಕೆಂದು ನಿಶ್ಚಯಿಸಿದ್ದಾಳೆ. ಎಷ್ಟು ದಿನಗಳಿಂದ ಬರೆದಿಟ್ಟಿದ್ದ ಮೇಲ್! ದಿನಗಳೇನು.. ವರ್ಷವೇ ಆಯಿತೇನೋ. ಅಥವಾ, ವರ್ಷಗಳು?

ಈ ಹೊತ್ತು ಚಿನ್ಮಯಿ ಭಯದ ಮೂಡ್‍ನಲ್ಲೇನೂ ಇಲ್ಲ. ಆದರೂ ಅಂಥದೊಂದು ಒಕ್ಕಣೆ ಹೊಳೆದಿದ್ದು ಯಾಕೆ?
ತನ್ನೊಳಗಿನಲ್ಲಿ ಹಣಕುತ್ತಾಳೆ.
“ಮೇಲ್ ಮಾಡಲು ಮೀನಾಮೇಷ ಎಣಿಸ್ತಿರೋದು ಸಾಲದೇ?” ಅನ್ನುವ ಉತ್ತರ ಬರುತ್ತದೆ.
ಹೌದಲ್ಲ! ‘ದೇಹ ಮೀರಿದರೂ ನೆರಳಿಗೆ ಹೊಸ್ತಿಲು ದಾಟಲಾರದ ಭಯ..’ ಸೆಂಡ್ ಬಟನ್ ಒತ್ತಿಬಿಟ್ಟರೆ ಮುಗಿಯಿತು.
ಅದು ಹೊಸ್ತಿಲು. ಅದನ್ನು ದಾಟಲು ಹಿಂಜರಿಕೆ ಅಂದರೆ ಭಯವೇ ತಾನೆ!

“ಪ್ರೇಮ ನನ್ನನ್ನು ಎಲ್ಲ ಭಯಗಳಿಂದಲೂ ಮುಕ್ತಗೊಳಿಸಿತು.. ನನಗೆ ತಡೆಯಾಗಿದ್ದೆ ನಾನೇ, ಅದು ನನ್ನನ್ನೂ ನನ್ನಿಂದ ಮುಕ್ತಗೊಳಿಸಿತು!” ಮಾಹ್‍ಸತಿ ಗಂಜವಿಯ ಸಾಲು ಡೆಸ್ಕ್ ಟಾಪಿನಲ್ಲೇ ಇದೆ. ಖುದ್ದು ಚಿನ್ಮಯಿಯೇ ಮಾಡಿದ ಪೋಸ್ಟರ್.

“ಎದೆಯಾಳಕ್ಕಿಳಿಯದ ಮಾತುಗಳನ್ನು ಎಷ್ಟು ಅನುವಾದ ಮಾಡಿದರೆ ತಾನೆ ಏನು?” ಯೋಚಿಸುತ್ತಾಳೆ ಚಿನ್ಮಯಿ.
“ಹೃದ್ಗತವಾದರೂ ಹಾಗೊಮ್ಮೆ, ಕಾರ್ಯರೂಪಕ್ಕೆ ಇಳಿಯೋದು ಯಾವಾಗ!?”

ಪ್ರೇಮ ಹೊಸತಾಗಿ ಘಟಿಸಿದೆ. ಇಷ್ಟು ದಿನದ ಹಪಾಹಪಿಯನ್ನೆಲ್ಲ ನೀವಾಳಿಸಿ ಎಸೆದಿದೆ.
ನಲವತ್ತರ ಬೂದುಗೂದಲು ಸವರಿ ಕಿವಿಹಿಂದೆ ಸಿಗಿಸುತ್ತಾ ತುಟಿ ಕಚ್ಚುತ್ತಿದ್ದಾಳೆ.
ಹೌದಲ್ಲ! ಪ್ರೇಮ ಎಲ್ಲ ಭಯಗಳಿಂದಲೂ ಮುಕ್ತಗೊಳಿಸುತ್ತೆ!!

ಚಿನ್ಮಯಿಗೆ ಒಂದು ಎಳೆಯನ್ನು ಮತ್ತೆಲ್ಲಿಗೋ ಜೋಡಿಸುವುದು ಬಹಳ ಇಷ್ಟದ ಕೆಲಸ.
ಹಾಗೆ ಜೋಡಿಸುತ್ತಾ ಜೋಡಿಸುತ್ತಾ ಸಿಕ್ಕಿನೊಳಗೆ ಸಿಲುಕುವುದೂ ಮಾಮೂಲು.
ಅಲ್ಲಿಂದ ಹೊರಗೆ ಬರುವ ಹೊತ್ತಿಗೆ ಮೂಲ ವಿಷಯವೇ ಅಪ್ರಸ್ತುತವಾಗಿಬಿಟ್ಟಿರುತ್ತದೆ.
ಪುಣ್ಯವೆಂದರೆ, ಚಿನ್ಮಯಿಗೆ ತನ್ನ ಈ ಎಲ್ಲ ಆಟಗಳೂ ಚೆನ್ನಾಗಿ ಗೊತ್ತು.

ಮಾಹ್‍ಸತಿಯ ಹಿಂದೆ ಹೊರಟ ಮನಸ್ಸನ್ನು ಕಿವಿ ಹಿಂಡಿ ಮರಳಿ ತರುತ್ತಾಳೆ
ಹೊಸ ಬದುಕು ಶುರುವಾಗಬೇಕು. ಅದು ಆಗಬೇಕೆಂದರೆ, ಡ್ರಾಫ್ಟ್‍ನಲ್ಲಿರುವ ಮೇಲ್ ಕಳಿಸಲೇಬೇಕು.
ಡ್ರಾಫ್ಟ್ ವಿಂಡೋ ತೆರೆಯುತ್ತಾಳೆ ಚಿನ್ಮಯಿ. ಅದರಲ್ಲಿ ಹತ್ತಾರು ಮೇಲ್‍ಗಳು ಮುಖ ಮುರಿದು ಕುಂತಿವೆ. ಅವೆಲ್ಲವೂ ಅವಳ ಬದುಕಿನ ತುಣುಕುಗಳ ದಾಖಲೆ.
ಅವುಗಳಲ್ಲಿ ಕಳೆದ ತಿಂಗಳು ಅಪ್‍ಡೇಟ್ ಮಾಡಿಟ್ಟ ಒಂದು ಮೇಲ್ ತೆರೆಯುತ್ತಾಳೆ. ಎರಡು ಸಲ ಓದಿಕೊಳ್ಳುತ್ತಾಳೆ.
ಕೆನ್ನೆ ಮೇಲೆ ಹಾವಿನಂತೆ ಕಣ್ಣೀರು ಜಾರುತ್ತಿದೆ.

ಭಾಷೆ ಕಹಿಯಾಯಿತು ಅನಿಸಿ ಅಲ್ಲಲ್ಲಿ ಒಂದಷ್ಟು ನಯಗೊಳಿಸುತ್ತಾಳೆ. ಅಟ್ಯಾಚ್ ಮಾಡಿದ್ದ ಒಂದು ಫೋಟೋ ರಿಮೂವ್ ಮಾಡುತ್ತಾಳೆ. ಕಾಯಿಲೆ ಬಿದ್ದಾಗ ತೆಗೆದುಕೊಂಡಿದ್ದ ಸೆಲ್ಫೀ.
“ಅವನಿಗೆ ಪಾಠ ಮಾಡಲಿಕ್ಕೆ ನನ್ನನ್ನು ಯಾಕೆ ಕಡಿಮೆ ಮಾಡಿಕೊಳ್ಬೇಕು?” ಅನ್ನಿಸುತ್ತದೆ.
ಅಲ್ಲಿ ವಿದ್ರೋಹದ ಆರೋಪವಿದೆ. ಅದನ್ನು ತೆಗೆಯುತ್ತಾಳೆ.
ಚಿನ್ಮಯಿಗೆ ಈಗ ಪ್ರೇಮ ವಿದ್ರೋಹಕ್ಕೆ ಒಳಗಾಗೋದಿಲ್ಲವೆಂದು ಗೊತ್ತಿದೆ. ವಿದ್ರೋಹವೆಸಗುವವರು ಪ್ರೇಮಿಸಿಯೇ ಇರೋದಿಲ್ಲ! ಅದು ಪ್ರೇಮವಲ್ಲ ಎಂದಾದ ಮೇಲೆ ದುಃಖಿಸೋದು ಯಾಕಾಗಿ!?

ನೆಲದ ಮೇಲೆ ಬಿದ್ದ ಬೆಳಕಿನ ಚೌಕಟ್ಟು ಕರಗುತ್ತಿದೆ.
“ಈಗ ಇಲ್ಲದಿದ್ದರೆ ಮತ್ತೆಂದಿಗೂ ಇಲ್ಲ!” ಚಿನ್ಮಯಿ ಗಟ್ಟಿಯಾಗುತ್ತಾಳೆ.

ಸಬ್ಜೆಕ್ಟಿನಲ್ಲಿ ‘ಸ್ನೇಹಪೂರ್ಣ ವಿದಾಯ’ ಎಂದು ತುಂಬುತ್ತಾಳೆ. ಹಿಂದಿನ ಬಾರಿಯ ತಿದ್ದುಪಡಿಯಲ್ಲಿ ‘ಗುಡ್ ಬೈ’ ಎಂದಷ್ಟೇ ಇತ್ತು. ಹಲವು ತಿದ್ದುಪಡಿಗಳ ಹಿಂದೆ, ಮೊದಲ ಸಲ ಆ ಮೇಲ್ ಬರೆದಾಗ ಸಬ್ಜೆಕ್ಟಿನಲ್ಲಿದ್ದುದ್ದು ‘Fuck off… Good bye for ever’ ಎಂದು!

ಚಿನ್ಮಯಿಗೆ ತಾನು ಇದನ್ನು ಕಳಿಸಲು ತಡ ಮಾಡಿದ್ದೇ ಒಳ್ಳೆಯದಾಯಿತು ಅನ್ನಿಸುತ್ತದೆ. ತನ್ನ ವಾದಕ್ಕೆ ಪೂರಕವಾದ ದಾಖಲೆಗಳನ್ನೆಲ್ಲ ಯಾವತ್ತೋ ಸೇರಿಸಿಟ್ಟಿದ್ದಳಲ್ಲ.. ‘ಡಿಟ್ಯಾಚ್ ಆಗಲು ಎಷ್ಟೆಲ್ಲ ಅಟ್ಯಾಚ್‍ಮೆಂಟುಗಳ ಸಾಕ್ಷಿ ಬೇಕು!” ಅಂದುಕೊಂಡು ತಲೆ ಕೊಡವುತ್ತಾಳೆ.
ಹೊಕ್ಕುಳ ಮೇಲೆ ಕೈಯಿಟ್ಟು ಹಗೂರ ಉಸಿರಾಡಿ, ಕೊನೆಗೂ ಸೆಂಡ್ ಬಟನ್ ಒತ್ತೇ ಬಿಡುತ್ತಾಳೆ.

(ಆ Mailನಲ್ಲಿ ಏನಿತ್ತು? ಮುಂದಿನ ಸಂಚಿಕೆಯಲ್ಲಿ….)

ಸೆಕ್ಸ್‌: ನಿರಾಕರಣೆಯ ಹಕ್ಕು

ದೆಹಲಿ ಹೈಕೋರ್ಟ್ ಒಂದು ಐತಿಹಾಸಿಕ  ತೀರ್ಪು ನೀಡಿತು. ಹೆಂಡತಿ ಮೊದಲ ರಾತ್ರಿಯಿಂದ ಹಿಡಿದು ಮದುವೆಯಾದ ಐದು ತಿಂಗಳ ಪರ‍್ಯಂತ ಸೆಕ್ಸ್ ಅನ್ನು ನಿರಾಕರಿಸಿದಳು ಎನ್ನುವುದು ಫಿರ‍್ಯಾದಿಯ ದೂರಾಗಿತ್ತು. ದಂಪತಿಗಳಲ್ಲಿ ಯಾರೊಬ್ಬರ ಕಡೆಯಿಂದ ಸೆಕ್ಸ್ ನಿರಾಕರಿಸಲ್ಪಟ್ಟರೂ ಅದನ್ನು ಕ್ರೌರ‍್ಯವೆಂದು ಪರಿಗಣಿಸಲಾಗುತ್ತದೆ ಹಾಗೂ ಇದನ್ನು ಆಧಾರವಾಗಿಟ್ಟುಕೊಂಡು ಡೈವೋರ್ಸ್ ಪಡೆಯಬಹುದು ಎಂದು ಹೈಕೋರ್ಟ್ ಹೇಳಿತು.
ಈಗ ಈ ತೀರ್ಪಿನ ಸಾಧಕ ಬಾಧಕಗಳ ಬಗ್ಗೆ ಒಂದಷ್ಟು ಚರ್ಚೆ ನಡೆಯಿತು. ಗಂಡಸರು ಈ ಅವಕಾಶದ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಕೆಲವರು ವಾದಿಸಿದರೆ, ದೈಹಿಕ, ಮಾನಸಿಕ ಮೊದಲಾದ ಹತ್ತು ಹಲವು ಕಾರಣಗಳಿಂದಾಗಿ ಹೆಂಡತಿಯು ಸೆಕ್ಸ್ ನಿರಾಕರಿಸುವ ಹಕ್ಕನ್ನು ಇದು ಕಿತ್ತುಕೊಳ್ಳುತ್ತದೆ ಎಂದು ಕೆಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ತೀರ್ಪಿನಲ್ಲಿ ಗಂಡ ಮತ್ತು ಹೆಂಡತಿ – ಇಬ್ಬರಿಗೂ ಸಮಾನ ಅವಕಾಶ ನೀಡಲಾಗಿದೆ ಎಂದು ಮತ್ತೆ ಕೆಲವರು ಸಮಾಧಾನ ಹೇಳುತ್ತಿದ್ದಾರೆ.
ಇವೆಲ್ಲ ಸರಿ. ಆದರೆ, ದಾಂಪತ್ಯದಲ್ಲಿ ಸೆಕ್ಸ್ ಅನ್ನುವ ವಿಷಯವನ್ನು ಮುಂದಿಟ್ಟುಕೊಂಡು ಮಾತಾಡಬೇಕಾದ ಅಂಶ ಮತ್ತೊಂದೇ ಇದೆ.

ಯಾರಿಗೆಷ್ಟು ಪಾಲು?
ಹೆಂಗಸರಿಗೆ ನಿರಾಕರಿಸಲ್ಪಟ್ಟಿರುವ ಹಲವಾರು ಹಕ್ಕುಗಳಲ್ಲಿ ಲೈಂಗಿಕತೆಯ ಹಕ್ಕೂ ಒಂದು ಎಂದು ಧಾರಾಳವಾಗಿ ಹೇಳಬಹುದು. ಅಥವಾ, ಹೆಂಗಸರು ಲೈಂಗಿಕತೆಯನ್ನು ನಿರಾಕರಿಸುವ ಹಕ್ಕನ್ನು ನಿರಾಕರಿಸಲಾಗಿದೆ ಎಂದೂ ಹೇಳಬಹುದು. ಯಾಕೆಂದರೆ ‘ಸೆಕ್ಸ್ ’, ಹೆಂಗಸರು ಉಚ್ಚರಿಸಲೂ ಬಾರದ ಪದ. ಒಂದೊಮ್ಮೆ ಹೆಂಡತಿ ತನ್ನ ವಾಂಛೆಯನ್ನು ಗಂಡನಲ್ಲಿ ತೋರಿಕೊಂಡರೆ ಆಕೆಯನ್ನು ಅಸಭ್ಯಳೆನ್ನುವಂತೆ ನೋಡಲಾಗುತ್ತದೆ. ಆಕೆ ಮುಕ್ತವಾಗಿ ಸೆಕ್ಸ್ ಅನ್ನು ಬಯಸುವಂತಿಲ್ಲ. ಹಾಗೆಯೇ ತನ್ನ ಆರೋಗ್ಯ, ಖಿನ್ನತೆ ಅಥವಾ ಮನೆವಾಳ್ತೆಯ ತಲೆಬಿಸಿಗಳಿಂದಾಗಿ ಗಂಡನೊಂದಿಗೆ ಸೆಕ್ಸ್ ನಿರಾಕರಿಸಿದರೆ ಆಕೆಯನ್ನು ಅವಿಧೇಯಳೆಂಬಂತೆ ನೋಡಲಾಗುತ್ತದೆ. ಅವಳು ಗಂಡನನ್ನು ವಂಚಿಸುತ್ತಿದ್ದಾಳೆಂದು ಅನುಮಾನಿಸಲಾಗುತ್ತದೆ. ಈ ನಿಟ್ಟಿನಿಂದ ಸೆಕ್ಸ್ ಹೆಣ್ಣು ಬಯಸಲೂಬಾರದ, ತಿರಸ್ಕರಿಸಲೂಬಾರದ ಸಂಗತಿ ಎನ್ನಬಹುದು.
ಸಾಮಾನ್ಯವಾಗಿ ಹೆಂಗಸರು ದಾಂಪತ್ಯದಲ್ಲಿ ಸೆಕ್ಸ್ ತಮಗೆ ತೃಪ್ತಿ ನೀಡುತ್ತಿದೆಯೇ ಇಲ್ಲವೇ ಎಂಬುದನ್ನು ಆಪ್ತರೊಡನೆ ಡಿಸ್ಕಸ್ ಮಾಡಲೂ ಹಿಂಜರಿಯುತ್ತಾರೆ. ಸಿನಿಮಾಗಳಲ್ಲಿ ತೋರಿಸುವಂತೆ ಮಲ್ಲಿಗೆ ಹೂ ಮುಡಿದು ಉಂಗುಷ್ಟದಿಂದ ನೆಲೆ ಕೆರೆಯುತ್ತಾ ನಿಂತುಬಿಟ್ಟರೆ ಅರ್ಥ ಮಾಡಿಕೊಳ್ಳುವಷ್ಟು ಸೂಕ್ಷ್ಮತೆ ಗಂಡಸರಿಗೆ ಇರುವುದಿಲ್ಲ. ಅಲ್ಲದೆ, ಸೆಕ್ಸ್ ಗಂಡ ಬಯಸಿದಾಗ ಮಾತ್ರ ನಡೆಯಬೇಕಿರುವ ಪ್ರಕ್ರಿಯೆ ಎಂಬ ಸಾಂಪ್ರದಾಯಿಕ ಮನೋಭಾವವೂ ಇಲ್ಲಿ ಕೆಲಸ ಮಾಡುತ್ತದೆ. ಹೆಂಡತಿಯ ಋತು ಸಮಸ್ಯೆ, ಆರೋಗ್ಯ, ಮೂಡ್ – ಇವೆಲ್ಲ ನಗಣ್ಯ ವಿಷಯಗಳಾಗಿಬಿಡುತ್ತವೆ.

ಲೀಗಲ್ ರೇಪ್
ಹೆಣ್ಣಿನ ಸಮ್ಮತಿ ಇಲ್ಲದೆ ನಡೆಸುವ ಸೆಕ್ಸ್ ಅನ್ನು ರೇಪ್ ಅನ್ನಬಹುದಾದರೆ, ಮದುವೆಯಾದ ಬಹುತೇಕ ಹೆಣ್ಣುಮಕ್ಕಳು ಪ್ರತಿನಿತ್ಯವೂ ‘ಲೀಗಲ್ ರೇಪ್’ಗೆ ಒಳಗಾಗುತ್ತಲೇ ಇರುತ್ತಾರೆ ಅನ್ನುವುದು ಬಹಳ ಹಳೆಯ ಅಬ್ಸರ್ವೇಷನ್. ಆದರೆ ಇದಕ್ಕೆ ಪರಿಹಾರ ಮಾತ್ರ ಈ ಕ್ಷಣಕ್ಕೂ ದೊರೆತಿಲ್ಲ. ಹಿಂದಿನ ದಿನಗಳಲ್ಲಿ ಬಹ್ವಂಶ ಹೆಂಗಸರಿಗೆ ತಾವು ಸೆಕ್ಸ್‌ಗೆ ಅಸಮ್ಮತಿ ತೋರಬಹುದು ಅಥವಾ ಒಳಗಿಂದೊಳಗೆ ಅಸಮಾಧಾನ ಪಟ್ಟುಕೊಳ್ಳಬಹುದು ಎಂಬುದೂ ತಿಳಿದಿರಲಿಲ್ಲ. ಇಂದಿನವರು ಕೊನೆಯ ಪಕ್ಷ ನಮಗೇನು ಬೇಕು, ಏನು ಬೇಡ ಎಂದಾದರೂ ಅರಿತುಕೊಳ್ಳಬಲ್ಲವರಾಗಿದ್ದಾರೆ. ನಡೆಯುತ್ತದೋ ಇಲ್ಲವೋ, ತಮ್ಮ ಮಟ್ಟಿನ ಪ್ರತಿರೋಧವನ್ನು ತೋರಬಲ್ಲವರಾಗಿದ್ದಾರೆ ಎನ್ನುವುದೇ ಸಮಾಧಾನ.
ಇಷ್ಟ ಇಲ್ಲದ ತಿಂಡಿಯನ್ನು ಮುಲಾಜಿಲ್ಲದೆ ಬೇಡ ಎಂದುಬಿಡುವ ನಾವು, ಇಷ್ಟವಿಲ್ಲದ ಸೆಕ್ಸ್ ಅನ್ನು ಯಾಕಾದರೂ ಒಪ್ಪಿಕೊಳ್ಳಬೇಕು? ಇಂಥ ನಿಲುವಿನ ಪ್ರಶ್ನೆಗಳು ದಾಂಪತ್ಯದ ತಳಪಾಯವನ್ನು ಅಲುಗಿಸುತ್ತವೆ ಎನ್ನುವುದೇನೋ ನಿಜ. ಆದರೆ ಎಲ್ಲ ಸಂದರ್ಭದಲ್ಲಿಯೂ ಹೆಂಗಸರೇ ಕಾಂಪ್ರೊಮೈಸ್ ಆಗಬೇಕು, ಧರ್ಮ, ಸಂಸ್ಕೃತಿ, ದಾಂಪತ್ಯ, ಕುಟುಂಬ- ಈ ಯಾವುದನ್ನು ಉಳಿಸಿಕೊಂಡು ಪರಂಪರೆಯನ್ನು ಸಾಗಿಸಿಕೊಂಡು ಹೋಗಬೇಕಾದರೂ ಹೆಂಗಸರೇ ಬಲಿಯಾಗಬೇಕು ಅಂತ ಬಯಸುವುದು ಮಾತ್ರ ಅನ್ಯಾಯ.
ಇಷ್ಟಕ್ಕೂ ಹೆಂಡತಿಯೊಂದಿಗೆ ಈ ನಿಟ್ಟಿನಲ್ಲಿ ಸಹಕರಿಸದೆ ಬ್ರಹ್ಮಚಾರಿಗಳಂತೆ ಇರುವ, ಸಮಾಜಕ್ಕೋ ಅಧ್ಯಾತ್ಮಕ್ಕೋ ಮುಡಿಪಾದ ಗಂಡಸರನ್ನು ನಾವು ಪೂಜ್ಯ ಭಾವನೆಯಿಂದ ಕಾಣುತ್ತೇವೆ.  ಅವರು ಕಾಮವನ್ನು ಗೆದ್ದವರೆಂದು ಗೌರವಿಸುತ್ತೇವೆ. ಆದರೆ ಮದುವೆಯ ನಂತರ ತಮ್ಮದೇ ಆಯ್ಕೆಯಿಂದ ಬ್ರಹ್ಮಚರ್ಯ ಅನುಸರಿಸುತ್ತೇನೆ, ಸಮಾಜ ಕಾರ್ಯಕ್ಕೆ ತನ್ನನ್ನು ಕೊಟ್ಟುಕೊಳ್ಳುತ್ತೇನೆ ಎಂದು ಹೊರಡುವ ಎಷ್ಟು ಹೆಂಗಸರನ್ನು ನಾವು ಗೌರವಿಸಿದ್ದೇವೆ? ಹೋಗಲಿ, ಅಂತಹದೊಂದು ನಿರ್ಧಾರಕ್ಕೆ ಅನುವು ಮಾಡಿಕೊಟ್ಟ ಗಂಡಸರ ಸಂಖ್ಯೆಯಾದರೂ ಎಷ್ಟಿದೆ!?

ಶೃಂಗಾರ ಸಮರಸ
ದಾಂಪತ್ಯದಲ್ಲಿ ಸೆಕ್ಸ್ ಗಂಡ ಹೆಂಡತಿಯರನ್ನು ಆಪ್ತವಾಗಿ ಬೆಸೆದಿಡುವ ಮುಖ್ಯ ಸೂತ್ರ. ಸೆಕ್ಸ್ ಇಲ್ಲದ ಮದುವೆ, ಮದುವೆಯಾದರೂ ಹೇಗೆ ಆದೀತು? ಆದರೆ ಪ್ರತಿಯೊಂದರಲ್ಲಿ ಇರಬೇಕಾದಂತೆ ಇಲ್ಲಿಯೂ ಸಮಾನತೆ ಇರಬೇಕು. ಪುರಾತನ ಸಾಹಿತ್ಯಕೃತಿ ಕಾಮಸೂತ್ರದಲ್ಲಿ ಹೇಳಿರುವಂತೆ ಗಂಡ ಹೆಂಡತಿಯರಿಬ್ಬರ ಬಯಕೆ, ಆಯ್ಕೆಗಳಿಗೆ ಸಮಾನ ಮನ್ನಣೆ ಇರಬೇಕು. ಮಂಚದ ಮೇಲೆ ಹೆಣ್ಣು ತನ್ನ ಬೇಕು- ಬೇಡಗಳನ್ನು ಎಗ್ಗಿಲ್ಲದೆ ಹೇಳಿಕೊಳ್ಳುವ ಮುಕ್ತತೆ ಇರಬೇಕು. ಆಗಷ್ಟೆ ದಾಂಪತ್ಯ ಅರ್ಥಪೂರ್ಣವಾಗುತ್ತದೆ.
ಸಂಗಾತಿಯಿಂದ ದೇಹದ ಕಾಮನೆಯನ್ನ ಪೂರೈಸಿಕೊಳ್ಳುವ ಬಯಕೆ ಸಾಮಾನ್ಯವೇ. ಅದಕ್ಕೆ ಸರಿಯಾದ ಪ್ರತಿಕ್ರಿಯೆ ದೊರಕದಿದ್ದರೆ ಎಲ್ಲಿ ತಪ್ಪಾಗಿದೆ, ಏನು ತೊಂದರೆಯಾಗಿದೆ ಎನ್ನುವುದನ್ನ ಗಂಡ ಹೆಂಡತಿ ಕುಳಿತು ಚರ್ಚಿಸಬೇಕು. ವೈದ್ಯರು ಅಥವಾ ಆಪ್ತಸಲಹೆಗಾರರ ಬಳಿ ಅದರ ಪರಿಹಾರಕ್ಕೆ ಪ್ರಯತ್ನಿಸಬೇಕು. ಕೂತು ಮಾತಾಡುವುದರಿಂದ ಬಗೆಹರಿಯದೆ ಇರುವುದು ಯಾವುದಿದೆ? ಹೆಣ್ಣು ಗಂಡುಗಳಲ್ಲಿ ಪರಸ್ಪರ ಗೌರವವೊಂದಿದ್ದರೆ ಯಾವುದೂ ಕಷ್ಟವಲ್ಲ ಅಲ್ಲವೆ?

ಮಾಟ ಮಂತ್ರ ಮತ್ತು ನಿಂಬೇಹಣ್ಣು!

ತಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳನ್ನ ಯಾರು ಹೊಂದಿರ್ತಾರೋ, ತಮ್ಮ ಸೋಲುಗಳ ಹೊಣೆ ಹೊರಲು – ಗೆಲುವಿನ ಜವಾಬ್ದಾರಿ ಹೊರಲು ಯಾರು ನಿರಾಕರಿಸ್ತಾರೋ ಅವರು ಮಾತ್ರವೇ ಹೀಗೆ ಮಾಟಮಂತ್ರಗಳ ಮೊರೆ ಹೋಗ್ತಾರೆ. ಅದು ನನಗೆ ಸ್ಪಷ್ಟವಾಗಿದ್ದು ಅಲ್ಲಿಯೇ.ಅಲ್ಲಿ ಅಂದ್ರೆ…. ಇಲ್ಲಿ ನೋಡಿ….

ಅಮ್ಮನ ಜಿವನ ಶ್ರದ್ಧೆ ಮತ್ತು ಶ್ರಾದ್ಧ

ತಾನು ಸತ್ತಮೇಲೆ ಅಧ್ಯಯನಕ್ಕೆ ಅನುಕೂಲ ಆಗುವಂತೆ ದೇಹ ದಾನಕ್ಕೆ ಬರೆದುಕೊಡಬೇಕನ್ನೋದು ಅಮ್ಮನ ಯಾವತ್ತಿನ ಬಯಕೆ. ಸುಮಾರು ಐದು ವರ್ಷಗಳ ಕೆಳಗೇ ಹಾಗೆ ನಿಶ್ಚೈಸಿಕೊಂಡಿದ್ದಳಾದರೂ ಕಳೆದ ಎರಡು ವರ್ಷಗಳಿಂದ ಅದನ್ನು ಬಲವಾಗಿ ಹಿಡಿದು ಕುಂತಿದ್ದಾಳೆ. ಪ್ರತಿ ಸರ್ತಿ ಹುಷಾರು ತಪ್ಪಿದಾಗ, ಬೀಪಿ ಏರುಪೇರಾದಗೆಲ್ಲ ಅವಳ ಈ ಯೋಚನೆಗೆ ಮತ್ತಷ್ಟು ರೆಕ್ಕೆ ಮೂಡುತ್ತದೆ…

ಅಸಲು ಕಥೆ ಇಲ್ಲಿದೆ…..

 

ಅವನ ಮೇಲಿನ ಮುನಿಸು ಮತ್ತು ಟೆಲಿಪಥಿಯ ತರ್ಕ

ನಾವೂ ಈ ಹೊತ್ತು ಏನು ಮಾಡ್ತಿರ‍್ತೀವೋ ನಮ್ಮ ಪ್ರಿಯರೂ ಹಾಗೇ ಮಾಡ್ತಿರ‍್ತಾರೆ… ಅಂದುಕೊಳ್ಳೋದೆಲ್ಲ ಎಷ್ಟೊಂದು ಸುಳ್ಳು!

ಪೂರ್ತಿ ಓದಿಗೆ ಇಲ್ಲಿ ನೋಡಿ….