ಬರೆಯೋದು ದಿನದ ಅನಿವಾರ್ಯವೂ ಹುಟ್ಟಿನೊಂದಿಗೆ ಅಂಟಿಕೊಂಡ ವ್ಯಸನವೂ ಆಗಿರುವಾಗ ಬರಹ ಒಂದು ವೈಶಿಷ್ಟ್ಯ ಅನ್ನಿಸೋದೇ ಇಲ್ಲ. “ನೀವ್ಯಾಕೆ ಬರೀತೀರಿ? ಹೀಗೆ ಹೇಗೆ ಬರೆಯೋಕೆ ಸಾಧ್ಯವಾಗಿದೆ? ಅಕ್ಷರಗಳೇ ಇಲ್ಲದ ಜಗತ್ತಿಗೆ ತಗೊಂಡೋಗಿ ನಿಮ್ಮನ್ನ ಬಿಟ್ರೆ ಏನುಮಾಡ್ತೀರಿ? ಥಟ್ ಅಂತ ಹೇಳಿ!” ಅಂತ ನಾ.ಸೋಮೇಶ್ವರ ಕೇಳಿದಾಗ ನಿಜ್ಜ ನಂಗೆ ಏನು ಹೇಳೋಕೂ ತೋಚಲೇ ಇಲ್ಲ. ಚೆಂದವೋ ಅಲ್ಲವೋ ಬರೆಯೋದು ನಂಗೆ ಮೀನು ಈಜುವಷ್ಟೇ ಸಹಜ ಸಂಗತಿ. ಅದು ಯಾವತ್ತೂ ನಾನು ಆವಾಹಿಸಿಕೊಂಡ ಹೊರಗಿನ ವಿಷಯವಲ್ಲ. ನನ್ನ ಅಲ್ಪ ತಿಳಿವಳಿಕೆ, ಚೂರುಪಾರು ಓದು, ಮೈಗೂಡಿದ ಅನುಭವಗಳ ಸೀಮಿತಿಯೊಳಗೆ ನಾಲ್ಕಕ್ಷರ ಬರೆದಿದ್ದನ್ನ ಗೆಳೆಯರು ಮೆಚ್ಚುತ್ತಾರೆ. ಪ್ರೀತಿಯ ಮಾತಾಡುತ್ತಾರೆ. ನನ್ನನ್ನ ಯಾರಾದ್ರೂ ಲೇಖಕಿ ಅಂತ ಕರೆಯೋದಾದರೆ, ಅದರ ಹಿನ್ನೆಲೆ ಇಷ್ಟೇನೇ. ನಾನು ಪ್ರಜ್ಞಾಪೂರ್ವಕವಾಗಿ ಅಥವಾ ಬಯಸೀಬಯಸಿ ಬರಹಗಾರಳಾಗಿರುವವಳಲ್ಲ.
ಹೀಗಿರುತ್ತ ನನ್ನ ನಾಲ್ಕನೆ ಪುಸ್ತಕ ಕೈಯಲ್ಲಿದೆ. ಹೆಸರು- ’ಬಿಸಿಲಚೂರಿನ ಬೆನ್ನು’. ಅದನ್ನ ಕೇಳಿದ ಅಣ್ಣ ’ನಿಂಗೆ ಸರಿಯಾಗಿದೆ ಟೈಟಲ್ಲು’ ಅಂದರೆ, ಮಗ ’ನಾನೊಂದು ಬುಕ್ ಬರೆದು ಬಿಸಿಲಚೂರಿನ ಮುಖ’ ಅಂತ ಹೆಸರಿಡ್ತೀನಿ ಅಂದ! ಇನ್ನು ನಿಮಗೆ ಹೇಗನ್ನಿಸಿತು? ಕೇಳುವ ಆಸೆ.
ಈ ಪುಸ್ತಕದಲ್ಲಿ ಇರುವುದು “ನನ್ನ, ನನ್ನಂಥದೇ ಹುಕ್ಕಿಯ, ಹುಚ್ಚಿನ ಸಾವಿರಾರು ಹೆಣ್ಣುಗಳ ಖುಷಿ, ಒಳತೋಟಿ, ಸೆಡವು, ಸಿಟ್ಟು, ನಡುಬೀದಿ ಜಗಳಗಳು, ಕೊನೆಗೆ ಪ್ರೇಮಕ್ಕೆ ಸೋಲುವ ಸಿದ್ಧ ಶರಣಾಗತಿಯ ಭಾವ ಕೂಡಾ.. ಇವು ನನ್ನವು ಮಾತ್ರವಲ್ಲ, ನಮ್ಮೆಲ್ಲರ ಕಥೆಗಳೂ..” ಹಾಗೇ, “ಜೀವನ ಪ್ರಯಾಣದ ಹಾದಿಗುಂಟ ತಿಳಿವಿನ ಬುತ್ತಿಯಂತೆ ಸಹಾಯಕ್ಕೆ ಬಂದ ಅನುಭವಗಳು,,, ಅವನ್ನು ನನಗಾಗಿ ಕಟ್ಟಿಕೊಟ್ಟವರ ಕಥೆಗಳು”, “ತಿಳಿಯಲಾಗದ, ತಿಳಿಯಲು ಹೆಣಗುತ್ತಿರುವ ತಾವೋ ವಿಚಾರಗಳು”, “ಓದಿನಷ್ಟೇ ಅಪ್ಯಾಯಮಾನ ಹಾಗೂ ಎಜುಕೇಟಿವ್ ಆಗಿರುವ ಸಿನೆಮಾ ಬರಹಗಳು” ಮತ್ತು “ಕಾಲಕ್ಷೇಪಕ್ಕಾಗಿಯೇ ಬರೆದ ಲಘು ಬರಹಗಳು” ಇವೆ.
ನೀವು ಓದಿ ಮೆಚ್ಚಿಕೊಂಡರೆ ಖುಷಿ. ನಿಮಗಿಷ್ಟವಾಗದಿದ್ದರೆ, ಅದನ್ನ ಹೇಳಿದರೆ ನನಗೆ ಮತ್ತಷ್ಟು ತಿದ್ದಿಕೊಂಡು ಚೆಂದವಾಗುವ ಅವಕಾಶ ದೊರೆಯುತ್ತಲ್ಲ ಅನ್ನುವ ಖುಷಿ…
ಈ ಪುಸ್ತಕ ಸ್ನೇಹಾ ಬುಕ್ ಹೌಸ್ ಮಳಿಗೆಯಲ್ಲಿ ಸಿಗುತ್ತದೆ. ಸದ್ಯಕ್ಕೆ ಬೆಂಗಳೂರು ಪುಸ್ತಕೋತ್ಸವದಲ್ಲೂ ಲಭ್ಯ.
ನಿಮ್ಮ ಪುಸ್ತಕ ಬರೆಯುವ ಹವ್ಯಾಸದ ಬಗ್ಗೆ ,
ಅವುಗಳ ಬಿಡುಗಡೆಯ ನಿರಾಡಂಬರತೆಯ ಬಗ್ಗೆ,
ಓದುಗರ ಬಗ್ಗೆ ಇರುವ ಕಾಳಜಿಗಳೂ ಕೂಡ ಈ ಪುಸ್ತಕ ಕೊಳ್ಳಲು ಉತ್ತೆಜಿಸುವ ಮೌಲ್ಯಗಳಾಗಿವೆ..
just curious to read…I cant wait to read these books and collect soon…