ನನಗೆ ಬಹಳ ಸರ್ತಿ ಅನ್ನಿಸುತ್ತೆ, ನನ್ನ ಮೈಯೊಳಗಿನ ಜೀವಕೋಶಗಳು ಸದಾ ಜಿಗಿಜಿಗಿದಾಡ್ತಲೇ ಇರ್‍ತವೇನೋ ಅಂತ. ಅವಕ್ಕೆ ಸುಮ್ಮನಿರೋಕೆ ಬರುವುದೇ ಇಲ್ಲವೇನೋ ಅಂತ. ದಾರಿ ಬದಿಯ ಪಾಪ್‌ಕಾರ್ನ್ ಮಿಷನ್‌ಗಳನ್ನು ನೋಡುವಾಗೆಲ್ಲ ನನ್ನ ಜೀವಕೋಶಗಳೂ ಹೀಗೇನಾ ಅಂತ ಯೋಚಿಸ್ತೀನಿ. ಜೋಳ ಬೆಂಕಿಯುರಿಗೆ ಹುರಿದು ಹಾರುವಂತೆ ನನ್ನೊಳಗು ಅದ್ಯಾವ ಕಾವಿಗೆ ಹೀಗೆ ಪುಟಿಯುತ್ತದೆಯೋ!?
ಗೆಳೆಯ ಅನ್ತಾನೆ, ‘ಸುಮ್ಮನಿರುವುದೆ ಸಾಧನೆ’ ಅಂತ. ಅದು ನನಗೆ ಸಾಧ್ಯವಾ?
~
ಕೆಲವು ಸರ್ತಿ ಹೀಗಾಗುತ್ತೆ. ನಾನು ಸುಮ್ಮನಿರದಿದ್ದರೂ ಗದ್ದಲವೇನೂ ಮಾಡ್ತಿರೋದಿಲ್ಲ. ಹಾಗಿದ್ದೂ ಕೆಲವರು ಬಾಯಿಗೆ ಕೋಲು ತುರುಕಲು ಬರುತ್ತಾರೆ. ಲಂಕೇಶರು ಹೇಳುವ ‘ಪದಬೇಧಿ’ ಬಹಶಃ ಇದೇ ಇರಬೇಕು. ಸಿಕ್ಕಾಪಟ್ಟೆ ಬರೆಯೋದಲ್ಲ, ಬರೆಯುವಷ್ಟನ್ನೆ ಹೀಗೆ ಅಸಹ್ಯವಾಗಿ, ಹಳದಿಯಾಗಿ ಬರೆಯೋದು…
ಮತ್ತೆ ಕೆಲವು ಸರ್ತಿ ಹೀಗಾಗುತ್ತೆ. ನಾವೇನೋ ಹೇಳ್ತಾ ಇರ್‍ತೀವಿ. ಮತ್ತೊಬ್ಬರಿಗೆ ಅದು ಇಷ್ಟ ಇಲ್ಲ ಅಂದ್ರೆ ವ್ಯಕ್ತಪಡಿಸೋಕೆ ಹಲವು ಅವಕಾಶಗಳೂ ದಾರಿಗಳೂ ಇರುತ್ತವೆ. ಆಯಾ ವ್ಯಕ್ತಿಯ ಮನಸ್ಥಿತಿಯ ಮೇಲೆ ಅವರು ಆಯ್ದುಕೊಳ್ಳೋ ದಾರಿ ನಿರ್ಧಾರವಾಗುತ್ತೆ. ಚರ್ಚೆ ಮಾಡುವಾಗ (ಪ್ರತ್ಯೇಕವಾಗಿ ಮಾತಾಡುವಾಗ ಅಲ್ಲ) ವ್ಯಕ್ತಿಯೊಬ್ಬರು ಬಳಸುವ ಭಾಷೆಯೇ ಅವರ ಸೋಲನ್ನು, ಹತಾಶೆಯನ್ನು, ಮಾನಸಿಕ ಸಮಸ್ಯೆಯನ್ನು ಪ್ರತಿಬಿಂಬಿಸುತ್ತೆ. ತನ್ನಲ್ಲಿ ಸತ್ವ ಇಲ್ಲದಾಗಲೇ ಅಂಥವರು ಅಸಭ್ಯ ಭಾಷೆ, ಸಲ್ಲದ ಮಾತುಗಳಿಂದ ಎದುರಾಳಿಯ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡ್ತಾರೆ.
~
ಹೀಗಾಯ್ತು. ಹಿರಿಯರೊಬ್ಬರು ಸುಖಾಸುಮ್ಮನೆ ನನ್ನ ವಿಷಯಕ್ಕೆ ಬಂದರು. ‘ನಿಷ್ಚೇತನ’ ಎಂದೆಲ್ಲ ಅಂದರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ನನ್ನ ವೃತ್ತಿಯ ಹಿರಿಯರು ಮತ್ತು ತಿಳಿದವರೆನ್ನುವ ಕಾರಣಕ್ಕೆ ಅವರ ಮೇಲೊಂದು ಗೌರವ ಇಟ್ಟುಕೊಂಡಿದ್ದೆ. ಆದರೆ ಹಾಗೆ ಗೌರವ ಪಡೆಯುವ ಅರ್ಹತೆ ಅವರಿಗಿಲ್ಲ ಅನ್ನೋದು ಅವರ ಮಾತುಗಳಿಂದ ಗೊತ್ತಾಯ್ತು. ವಾಸ್ತವವಾಗಿ ಅವರಂಥ ಅನುಭವಿ ನನ್ನಂತಹ ಚಿಗುರೆಲೆಯನ್ನ ಗಂಭಿರವಾಗಿ ಪರಿಗಣಿಸೋದೇ ಬೇಡವಿತ್ತು. ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಆ ಮನುಷ್ಯನ ಎದುರು ನನ್ನ ವೃತ್ತಿ ಅನುಭವ ನಗಣ್ಯವೇ ಸರಿ. ಹೀಗಿದ್ದೂ ಆತ ವಿಚಲಿತಗೊಂಡು ಅಷ್ಟು ಡಿಸ್ಟರ್ಬ್‌ಡ್ ಆಗಿ ಸಭ್ಯವಲ್ಲದ ರೀತೀಲಿ ರಿಪ್ಲೇ ಮಾಡಿದ್ದಾರೆ ಅಂದ್ರೆ… ಮಜಾ ಅನ್ಸತ್ತೆ.
ಕೆಲವು ಸರ್ತಿ ಹೀಗಾಗಿದೆ. ಆಗೆಲ್ಲ ಗೆಳತಿ ಹೇಳ್ತಾಳೆ, `ಮತ್ಯಾರೋ ನಮ್ಮಿಂದ ಉರ್ಕೊಳ್ತಾರೆ ಅಂದ್ರೆ ಖುಷಿ ಪಡಬೇಕು ಕಣೇ. ನಮ್ಮಲ್ಲಿ ನಿಜವಾಗ್ಲೂ ಸತ್ವ ಇದೆ ಅಂತ ಇದರಿಂದ ಸಾಬೀತಾಗತ್ತೆ!’
~
ಮೊನ್ನೆ ನನ್ನೊಬ್ಬ ತಮ್ಮ ಕರೆ ಮಾಡಿದ್ದ. ಅದೂಇದೂ ಮಾತು ಮುಗಿದ ಮೇಲೆ ಅವನೊಂದು ಕಥೆ ಹೇಳಿದ. ಆ ಕಥೆಯ ಮುಖ್ಯ ಪಾತ್ರ ನಾನೇ ಆಗಿದ್ದೆನಾದರೂ ಅದರೊಳಗಿನ ಯಾವ ಘಟನೆಯೂ ನನ್ನ ಬದುಕಲ್ಲಿ ಘಟಿಸಿದ್ದಾಗಿರಲಿಲ್ಲ!
ಸಖೇದಾಶ್ಚರ್ಯ ಅನ್ನುವ ಪದವನ್ನ ಇಲ್ಲಿ ಬಳಸೋಣ ಅನ್ನಿಸತ್ತೆ. ನನಗೆ ಅಂಥದೇ ಅನುಭವವಾಯ್ತು. ನಾನು ಬದುಕಿದ್ದೀನಿ. ಸಾಧನೆ ಸೊನ್ನೆ. ನಡೆದಿದ್ದು- ಅನ್ನಿಸಿದ್ದೆಲ್ಲ ಆಯಾ ಹೊತ್ತೇ ಹಾಹಾಗೇ ಹೊರಗೆಡವಿಕೊಳ್ತೀನಿ. ಹೀಗಿರುವಾಗ ನನ್ನ ಸುತ್ತಲೇ ನನ್ನ ಜತೆಯವರೇ ನನ್ನ ಬದುಕಿನ ಕಥೆಯನ್ನ ತಮಗಿಷ್ಟ ಬಂದ ಹಾಗೆ ಬರೀತಾರೆ, ಸೊಳ್ಳೆಗಳ ಹಾಗೆ ಕಿವಿ ಕಚ್ಚುತ್ತ ಡೆಂಗ್ಯೂ ಹರಡಿದಂತೆ ಹರಡ್ತಾರೆ. ಇನ್ನು, ಮಹಾ ಸಾಧಕರು, ಚಾರಿತ್ರಿಕ ವ್ಯಕ್ತಿಗಳ ಬಗ್ಗೆ ಇರುವುದನ್ನೇ ಕುಲಗೆಡಿಸಿ ಅಸಭ್ಯ ಭಾಷೆಯಲ್ಲಿ, ಅಪಾರ್ಥ ಬರುವ ಹಾಗೆ, ಗೌರವ ಕಡಿಮೆ ಮಾಡುವ ರೀತಿಯಲ್ಲಿ ಬರೆಯೋದು, ಮಾತಾಡೋದು ಅಚ್ಚರಿಯ ಸಂಗತಿಯೇನಲ್ಲ.
ಈ ಸಂಗತಿ ಹೊಳೆದು, ಈ ಅಕ್ಷರಗಳನ್ನ ಕೀಬೋರ್ಡಿನಲ್ಲಿ ಮೂಡಿಸ್ತಿರುವಾಗ್ಲೇ ಅನ್ನಿಸ್ತಾ ಇದೆ, ನನ್ನಂಥಾ ಚಿಲ್ಲರೆ ಜೀವದ ಬಗ್ಗೆ ವಿಚಲಿತಗೊಂಡು ಅಸೂಕ್ಷ್ಮ ಭಾಷೆಯಲ್ಲಿ ಬರೆದ ಮಹಾನುಭಾವ ಶತಮಾನದ ಐಕಾನ್ ಬಗ್ಗೆ ಬರೆಯುವಾಗ ಹಾಗೆಲ್ಲ ಬಡಬಡಿಕೆ ಮಾಡಿರುವುದರಲ್ಲಿ ವಿಶೇಷವೇನಿದೆ? ಅವರ ಯೋಗ್ಯತೆ ಅಷ್ಟು ದೊಡ್ಡದು. ಸದ್ಯದಲ್ಲೇ ಅವರ ಪಾದಗಳದೊಂದು ಝೆರಾಕ್ಸ್ ಪ್ರತಿ ತರೆಸಿಕೊಳ್ಳಬೇಕಿದೆ. ಫ್ರೇಮ್ ಹಾಕಿ ತೂಗು ಹಾಕಿಕೊಳ್ಳೋಕೆ…

sensable writeing