‘ಮಗು’ ~ ಮೂರು ಪದ್ಯಗಳು


ಈ ಮೂರು ಕವಿತೆಗಳು ಕಾಲಕ್ರಮದಲ್ಲಿ ಮಗನ ಹುಟ್ಟುಹಬ್ಬದ ಸಂದರ್ಭಗಳಲ್ಲಿ ಬರೆದವು. ಈ ಮೂರೂ ಕವಿತೆಗಳು ಬದುಕಿನ ಪಲ್ಲಟಗಳನ್ನು ಸಂಕೇತಿಸುತ್ತವೆಂದು ಅಂದುಕೊಳ್ಳುತ್ತೇನೆ. 

ಮಗುವಲ್ಲಿ ಅವನ ನಗು!

(2007)

ಮಗು.
ಅರೆ! ನನ್ನದೇ ಜೀವ, ನನ್ನ ನಿರಂತರತೆ.
ಆದರೆ ಅದು ನಾನಲ್ಲ. ಅದು ನಾನು ಮಾತ್ರ ಅಲ್ಲ.
ಅಂವ ಕೂಡ ಅಂದುಕೊಳ್ತಾನೇನೋ, ನನ್ನ ಮಗು, ನನ್ನದೇ ನಿರಂತರತೆ!

ಮಗು. . .
ಈಗ ತಾನೆ ಕಡೆದು ತೆಗೆದ ಮೆದು ಬೆಣ್ಣೆ.
ಕಾದು ಕಾದು ಹೊನ್ನುಗಟ್ಟಿದ ಹಾಲುಕೆನೆ.
ಮಗು,
ಹುಲ್ಲಿನೆಳೆಯ ಮೇಲಿನ ಇಬ್ಬನಿ ಮುತ್ತು!
ಅಯ್ಯೋ! ಅದೇನು ಮಗ್ಗುಲ ಮುಳ್ಳು?
ಮಗು-
ವಲ್ಲಿ ಅವನ ನಗು!!
ಇತಿಹಾಸ ಕೆದಕುವ ವಾಸ್ತವ.

ಮತ್ತೆ ಮಗು.
ಅದು ನಾನಲ್ಲ. ಅವನೂ ಅಲ್ಲ.
ಅದರ ಹುಟ್ಟಿಗೆ ನಾವೊಂದು ಪಿಳ್ಳೆ ನೆವ ಮಾತ್ರ.
ನಾವು ಕೊಟ್ಟಿದ್ದು ಬರಿ ಜೀವಕೋಶಗಳನ್ನ, ಜೀವವನ್ನಲ್ಲ!
-ಹಾಗಂದುಕೊಳ್ಳುತ್ತೇನೆ.
ಇವನ ಮುಖದಲ್ಲಿ ಅವನ ನಗು ಕಾಣದಂತೆ ತೇಪೆ ಹಾಕುತ್ತೇನೆ.
ಆದರೂ,
ಅಂವ ಹಣಕುತ್ತಾನೆ.
ಉಮ್ಮಳಿಸುತ್ತೇನೆ;
ಗೋರಿ ಸ್ವಾತಂತ್ರ್ಯದ ಕವನ ಕಟ್ಟಿ, ಕಣ್ಣೀರಲ್ಲಿ ಕೈತೊಳೆದು, ಬೇಲಿಗಳಲ್ಲಿ ಉಸಿರು ಬಿಗಿದು. . .
‘ದೌರ್ಜನ್ಯ!’ ಚೀರುತ್ತೇನೆ. ಹೆಣ್ತನದ ವಕೀಲಿಗಿಳಿಯುತ್ತೇನೆ.
ಅದಕ್ಕಾಗೇ ಹೊಸಿಲು ದಾಟಿ ಹೊರಡುತ್ತೇನೆ.

ಅವನ ನಗು ಹೊತ್ತ ಮಗು, ಬಾಗಿಲಾಚೆಯೇ ಉಳಿಯುತ್ತದೆ.

ಸತ್ಯಕಾಮರ ಸಾಲು: ಒಬ್ಬಳು ಹೆಣ್ತನವನ್ನ ಮೀರಿದಾಗ ಮಾತ್ರ ತಾಯಿಯಾಗುತ್ತಾಳೆ.
~

ಮಗುವಿಗೊಂದು ಪತ್ರ

(2010)

ಹೆಜ್ಜೆ ಕಿತ್ತು ಬಂದ ದಿನದ ನೆನಪು ಹಾಗೇ ಇದೆ.
ಮುಳ್ಳು ಕಿತ್ತ ನೋವು,
ಮುಳ್ಳು ಕಿತ್ತ ನಿರುಮ್ಮಳ,
ಹಾಗೇ ಇದೆ.

ಕಿವುಡಾಗಲೇಬೇಕಿತ್ತು ನಾನು,
ಕುರುಡಾಗಲೇಬೇಕಿತ್ತು.
ಮೂಕತನವನೆಲ್ಲ ಹುಗಿದು
ಮಾತಾಡಲೇಬೇಕಿತ್ತು.
ಅಬ್ಬರದ ಸಂತೆಯಲಿ ನೀನು
ಅಮ್ಮಾ ಅಂದಿದ್ದು-
ಎದೆಯ ಆಚೆಗೇ ನಿಂತು ಹೋಗಿತ್ತು…

ನಿನ್ನ ಪುಟ್ಟ ಕೈಗಳು ನನ್ನ
ತಡೆಯಲಾಗಲಿಲ್ಲ.
ಪ್ರಶ್ನೆಗಳ ಕಂಬನಿ ಕರೆಗಟ್ಟಿದ್ದ
ಕಣ್ಣುಗಳನ್ನ
ತಪ್ಪಿಸಿಬರಬೇಕಿತ್ತು…

ನಾ ಕಳೆದ ನಿನ್ನ ಬದುಕಿನ ಮೊತ್ತ
ಲೆಕ್ಕವಿಟ್ಟಿದೇನೆ ಮಗೂ,
ನಿನ್ನ ನೋವಿನ ಋಣ
ನನ್ನ ಹೆಗಲ ಮೇಲಿದೆ.
ನೆನಪಿಗೊಂದು ಕಂಬನಿ ಸುರಿದು
ಸಾಗರವಾಯ್ತೆಂದು ಸುಳ್ಳಾಡಲಾರೆ,
ನಿನ್ನ ನೆನೆಯುವ ಧೈರ್ಯ ನನಗಿಲ್ಲವಾಗಿದೆ.

ಮಗೂ,
ಸೋಗು ನಗುವಿನ ನನ್ನ
ಕಣ್ಣುಗಳನೊರೆಸಿ,
ಉತ್ತರ ಗೊತ್ತೆಂದು ಹೇಳುವ ದಿನಕಾಗಿ
ಕಾದಿದ್ದೇನೆ.

ಅದಕೆಂದೇ ಅಕ್ಷರಗಳ ಸಾಲು ಹಾಸಿ,
ಸೇತುವೆ ಕಟ್ಟಿದೇನೆ.
ನಿನ್ನ ಹೆಮ್ಮೆಗೆ ಉಬ್ಬಿ,
ಹಗುರಾಗುವ ದಿನಕಾಗಿ
ಕಾದಿದ್ದೇನೆ ಮಗೂ,
ಮುಳ್ಳು ಕಿತ್ತ ಗಾಯ
ಮಾಯುವುದನ್ನೆ ಕಾಯುತ್ತಿದ್ದೇನೆ…
~

ಅವನ ಹುಟ್ಟಿಗೆ ಹದಿನಾಲ್ಕು ವರ್ಷ!

(2013)

ಸ್ಕರ್ಟ್ ಹಾಕ್ಕೊಬೇಡ ಹೊರಬರುವಾಗ,
ಟಾಪ್ ಚೂರು ಉದ್ದವಿರಲಿ…
ಎಷ್ಟು ಮಾತು ಫೋನಲ್ಲಿ!
ಚಾಟ್‌ನ ತುದಿಯಲ್ಯಾರು?
– ಅವನು ಗಂಡಸಾಗುತ್ತಿದ್ದಾನೆ;
ನನಗೆ ಅಚ್ಚರಿ ಮತ್ತು ಆತಂಕ.

ಹೆಚ್ಚೂಕಡಿಮೆ ಒಟ್ಟಿಗೇ
ಹುಟ್ಟಿಕೊಂಡವರು ನಾವು.
ಎರಡು ದಶಕದಂತರವಷ್ಟೆ;
ಅವನೆಷ್ಟು ಬೆಳದಿದ್ದಾನೆ!
ನನಗಿಂತ ಎತ್ತರ, ಮಾತಿನಲ್ಲೂ…
ಅವನ ಪುಟ್ಟ ಪಾದವೀಗ
ನನ್ನೆದೆ ಮೀರುವಷ್ಟುದ್ದ,
ಒದೆಯಬಹುದೇ ಎಂದಾದರೂ
ಪುಂಡ ಮಕ್ಕಳಂತೆ?
ಅವನ ತೊದಲು ನುಡಿಯೀಗ
ನಾಲಗೆ ಮೀರುವಷ್ಟುದ್ದ,
ಹಾಯಬಹುದೇ ನನ್ನ ಮೇಲೆ
ಸಾಕಿದ್ದು ಸರಿಯಿಲ್ಲವೆಂದು?
ಏನೆಲ್ಲ ಮಳ್ಳು ಚಿಂತೆ!
ಎಷ್ಟು ಬೆಳೆದರೂ ಅವನು,
ನನ್ನ ಹೊಕ್ಕುಳ ಹಣ್ಣು.

‘ಗಲ್ಸ್…’ ಅನ್ನುವಾಗ ಮಿಂಚುತ್ತವನ ಕಣ್ಣು…
ಕನ್ನಡಿಯೆದುರು ಪದೇಪದೇ
ಮೀಸೆ ಮೂಡಿಲ್ಲ ಇನ್ನೂ, ಗಂಟಲೊಡೆದಿಲ್ಲ –
ಅವನ ಚಿಂತೆ ಅವನಿಗೆ…
ಏನೋದಿಯಾನು, ಏನಾದಾನು,
ನೊಗ ಹೊರುವ ಕಾಲ ಬಂದೇಬಿಡುವುದು
ಎಷ್ಟು ದಿನ ಗೂಡಲ್ಲಿರಬಹುದು ಹಕ್ಕಿಮರಿ?
– ನನ್ನ ಚಿಂತೆ ನನಗೆ…

ಅವನು,
ನನ್ನ ಹುಚ್ಚಾಟಗಳಿಗೆ ಚೌಕಟ್ಟು
ಬಡಾಯಿಗೆ ಬೇಲಿ
ರೆಕ್ಕೆಗೆ ಕಲ್ಲು
ಕಾಲಿಗೆ ಚಕ್ರ
ಬದುಕಿಗೊಂದು ಚೆಂದದ ನೆವ;
ಅವನು,
ಬಾಣಲೆಗೆ ಬೀಳದಂತೆ ನನ್ನ
ತಡೆದಿರುವ ಜಾಲರಿ ಕೂಡಾ….
ಅವನ್ಹುಟ್ಟಿಗೀಗ ವನವಾಸದಷ್ಟು ವರ್ಷ!
ಲೆಕ್ಕ ಹಾಕುವಾಗ ಬಯಕೆ,
ಕೇಡು ಕಳೆಯಬಹುದು
ರಾಜ್ಯ ಕೊಡಿಸಬಹುದು;
ರಣಚೋರಳಾಗದೆ ಇನ್ನೂ
ಕಾದಾಡಬೇಕು ನಾನು.

4 thoughts on “‘ಮಗು’ ~ ಮೂರು ಪದ್ಯಗಳು

Add yours

  1. Superb….. Loved all these three poems.

    Especially, the last one started rotating in my mind.
    Some lines which ask us to read 100 times are……

    ಹೆಚ್ಚೂಕಡಿಮೆ ಒಟ್ಟಿಗೇ
    ಹುಟ್ಟಿಕೊಂಡವರು ನಾವು.

    ಅವನ ಪುಟ್ಟ ಪಾದವೀಗ
    ನನ್ನೆದೆ ಮೀರುವಷ್ಟುದ್ದ,
    ಒದೆಯಬಹುದೇ ಎಂದಾದರೂ
    ಪುಂಡ ಮಕ್ಕಳಂತೆ?

    ನೊಗ ಹೊರುವ ಕಾಲ ಬಂದೇಬಿಡುವುದು
    ಎಷ್ಟು ದಿನ ಗೂಡಲ್ಲಿರಬಹುದು ಹಕ್ಕಿಮರಿ?
    – ನನ್ನ ಚಿಂತೆ ನನಗೆ…

    And I wish a many happy returns of the day to putta!

  2. ಎರಡನೆಯದ್ದು ತುಂಬಾ ಆಪ್ತ…

    ಅದಕೆಂದೇ ಅಕ್ಷರಗಳ ಸಾಲು ಹಾಸಿ,
    ಸೇತುವೆ ಕಟ್ಟಿದೇನೆ.
    ನಿನ್ನ ಹೆಮ್ಮೆಗೆ ಉಬ್ಬಿ,
    ಹಗುರಾಗುವ ದಿನಕಾಗಿ
    ಕಾದಿದ್ದೇನೆ ಮಗೂ,
    ಮುಳ್ಳು ಕಿತ್ತ ಗಾಯ
    ಮಾಯುವುದನ್ನೆ ಕಾಯುತ್ತಿದ್ದೇನೆ…

    just excellent !

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑